ಮಂಗಳೂರು, ಜು.27(DaijiworldNews/AA): ಕೇಂದ್ರ ಸರ್ಕಾರದ ಬಜೆಟ್ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಮಂಗಳೂರಿನ ಮನಪ ಕಚೇರಿ ಮುಂಭಾಗದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿತು. ಈ ಪ್ರತಿಭಟನಾ ಸಭೆಯಲ್ಲಿ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಬಜೆಟ್ ವಿರುದ್ಧ ಕಿಡಿಕಾರಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಎಂಎಲ್ಸಿ ಐವನ್ ಡಿಸೋಜ ಅವರು, ಎಲ್ಲಾ ರಾಜ್ಯಗಳೊಂದಿಗೆ ಹಣವನ್ನು ಹಂಚಿಕೊಳ್ಳಲು ಕಾನೂನು ಬಾಧ್ಯತೆ ಇದೆ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು. ನಾವು ಮಹಾರಾಷ್ಟ್ರದ ನಂತರ ಕೇಂದ್ರಕ್ಕೆ ಎರಡನೇ ಅತಿ ಹೆಚ್ಚು ತೆರಿಗೆಯನ್ನು ಪಾವತಿಸುತ್ತೇವೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಮಗೆ ಏನು ದೊರೆತಿಲ್ಲ. ನಾವು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದರಿಂದ ಕೇಂದ್ರ ಸರ್ಕಾರ ಹಣ ತಡೆಹಿಡಿದಿದೆ. ಹೀಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂಎಲ್ಸಿ ಹರೀಶ್ ಕುಮಾರ್ ಮಾತನಾಡಿ, ನಿರ್ಮಲಾ ಸೀತಾರಾಮನ್ ಅವರು ಹೆಚ್ಚು ಬಾರಿ ಬಜೆಟ್ ಮಂಡಿಸಿದ ವಿತ್ತ ಸಚಿವೆ ಆಗಿದ್ದಾರೆ. ಆದರೆ ಈ ಬಜೆಟ್ ನಲ್ಲಿ ಏನು ಇಲ್ಲ ಖಾಲಿ ಖಾಲಿ ಬಜೆಟ್. ಕೇವಲ 2 ರಾಜ್ಯಗಳಿಗೆ ಮಾತ್ರ ಸಮಾಧಾನ ಪಡಿಸಲು ಮಂಡಿಸಿದ ಬಜೆಟ್ ಆಗಿದೆ. ಕೇವಲ ಜನರಿಗೆ ಚೊಂಬು ಕೊಡುವ ಬಜೆಟ್ ಇದಾಗಿದೆ. ಇದು ಅಧಿಕಾರ ಉಳಿಕೆಯ ಬಜೆಟ್ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಬೆಳ್ತಂಗಡಿ ಶಾಸಕರು ಅದೆಷ್ಟೋ ರೈಲು ಬಿಡ್ತಾರೋ ಗೊತ್ತಿಲ್ಲ. ಬೆಳ್ತಂಗಡಿಯಲ್ಲಿ ಮಿನಿ ವಿಮಾನ ನಿಲ್ದಾಣ ಮಾಡ್ತೇನೆ ಅನುದಾನ ಬಿಡುಗಡೆ ಆಗಿದೆ ಎಂದು ವಿಮಾನ ಬಿಟ್ಟರು. ಜಿಲ್ಲಾ ಪಂಚಾಯತ್ ಸಭೆಯಲ್ಲಿ ಕಾರ್ಕಳ ಸುಬ್ರಹ್ಮಣ್ಯ ಧರ್ಮಸ್ಥಳ ಭಾಗದಲ್ಲಿ ರೈಲು ಪ್ರಾರಂಭ ಎಂದ್ರು ರೈಲು ಬಿಟ್ಟರು. ಕೇವಲ ಪ್ರಚಾರ ಪಡೆಯುದು ಬಿಟ್ಟರೇ ಕಾರ್ಯಗಳು ಯಾವುದು ಈ ವರೆಗೆ ಆಗಿಲ್ಲ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಇದನ್ನೇ ಮಾಡಿದ್ದು. ಕಳೆದ 10 ವರ್ಷಗಳಲ್ಲಿ ಇರದ 2 ರಾಜ್ಯದ ಮೇಲಿನ ಪ್ರೀತಿ ಈ ಬಾರಿ ಹೆಚ್ಚಾಗಿದೆ ಎಂದು ಹರೀಶ್ ಕುಮಾರ್ ಹೇಳಿದರು.
ಮಾಜಿ ಶಾಸಕ ರಮಾನಾಥ್ ರೈ ಮಾತನಾಡಿ, ಮೋದಿ ಸರ್ಕಾರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ, ಬಜೆಟ್ನಲ್ಲಿ ನ್ಯಾಯಯುತವಾದ ಪಾಲು ನಿರೀಕ್ಷಿಸಿದ್ದೆವು ಆದರೆ ಏನೂ ಬಂದಿಲ್ಲ. ವಿ ಸೋಮಣ್ಣ ಅವರ ಜಿಲ್ಲೆಗೆ ಭೇಟಿ ನೀಡಿದರೂ ಯಾವುದೇ ಫಲ ನೀಡಲಿಲ್ಲ. ನಾವು ನ್ಯಾಯಯುತವಾಗಿ ಅರ್ಹವಾದುದನ್ನು ಕೇಳುತ್ತಿದ್ದೇವೆ ಎಂದು ತಿಳಿಸಿದರು.