ಮಂಗಳೂರು, ಮೇ17(Daijiworld News/SS): ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಕೇರಳದ ಕಾಸರಗೋಡು ಜಿಲ್ಲೆಯ ವ್ಯಕ್ತಿಯೊಬ್ಬರ ಬಹು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬದವರು ಸಾರ್ಥಕತೆ ಮೆರೆದಿದ್ದಾರೆ.
ಮೇ 11ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಸರಗೋಡು ಜಿಲ್ಲೆಯ ಚಂದ್ರಶೇಖರ್ (48) ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಗಾಯಾಳುವಿನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಪ್ರಕಟಿಸಿದ್ದರು.
ತಕ್ಷಣವೇ ವೈದ್ಯರೊಂದಿಗೆ ಸಮಾಲೋಚಿಸಿದ ಅವರ ಕುಟುಂಬದ ಸದಸ್ಯರು, ಸ್ವಯಂಪ್ರೇರಿತವಾಗಿಯೇ ಗಾಯಾಳುವಿನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ಚಂದ್ರಶೇಖರ್ ಅವರ ಕಣ್ಣುಗಳು, ಹೃದಯದ ಕವಾಟಗಳು, ಯಕೃತ್ತು ಮತ್ತು ಮೂತ್ರಕೋಶಗಳನ್ನು ದಾನ ಮಾಡಲು ಕುಟುಂಬ ಒಪ್ಪಿಗೆ ಸೂಚಿಸಿತ್ತು.
ಗಾಯಾಳುವಿನ ಹೃದಯದ ಕವಾಟಗಳು ಮತ್ತು ಯಕೃತ್ತನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಕಸಿ ಮಾಡಲಾಗುತ್ತಿದೆ.
ಮೇ.17ರ ಮಧ್ಯಾಹ್ನದ ಬಳಿಕ ಅಂಗಾಂಗಗಳನ್ನು ಚಂದ್ರಶೇಖರ್ ಅವರಿಂದ ಬೇರ್ಪಡಿಸಲಾಗಿದೆ. ಸಂಜೆ 4.15ಕ್ಕೆ ಹೃದಯದ ಕವಾಟಗಳು ಮತ್ತು ಯಕೃತ್ತನ್ನು ವಿಶೇಷ ಆಂಬುಲೆನ್ಸ್ನಲ್ಲಿ ಇರಿಸಿ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಯಿತು.
ಬಳಿಕ ಸಂಜೆ 5.15ರ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದರು. ಬಳಿಕ ಆಂಬುಲೆನ್ಸ್ ಮೂಲಕ ಫೋರ್ಟಿಸ್ ಆಸ್ಪತ್ರೆಗೆ ತಲುಪಿಸಲಾಗಿದೆ.