ಬೆಳ್ತಂಗಡಿ, ಜು.26(DaijiworldNews/AA): ತಾಲೂಕಿನ ನೆರಿಯ ಸೇರಿದಂತೆ ವಿವಿಧೆಡೆ ಭಾರೀ ಗಾಳಿ-ಮಳೆಗೆ ಪರಿಣಾಮ ವ್ಯಾಪಕ ಹಾನಿಯಾಗಿದ್ದು, ನಾಗರಿಕರು ಸಮಸ್ಯೆಗೆ ಸಿಲುಕಿದ್ದಾರೆ. ಅಣಿಯೂರಿನಿಂದ ನೆರಿಯ ಗ್ರಾಮ ಪಂಚಾಯತ್ ವರೆಗೆ ರಸ್ತೆ ಬದಿಯಲ್ಲಿದ್ದ ಮರಗಳು ಧರೆಗೆ ಉರುಳಿವೆ. ಪೆರಿಯಡ್ಕ ರಸ್ತೆಯಲ್ಲೂ ಐದಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ.
ಅಣಿಯೂರು ಬೀಟಿಗೆ ರಸ್ತೆ, ಅಪ್ಪಿಲ ಕುಕ್ಕೆಜಾಲು ರಸ್ತೆ ಸೇರಿದಂತೆ ವಿವಿಧೆಡೆ ಮರಗಳು ಮುರಿದು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಪ್ರಾಥಮಿಕ ಮಾಹಿತಿಯಂತೆ ಸುಮಾರು ೪೦ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆರಿಯ ಒಂದೇ ಗ್ರಾಮದಲ್ಲಿ ಉರುಳಿಬಿದ್ದಿವೆ. ಇದರಿಂದ ನೆರಿಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲೂ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.
ನೆರಿಯ ಗ್ರಾಮದ ಬಹುತೇಕ ಪ್ರದೇಶಗಳಲ್ಲಿ ಬೀಸಿದ ಬಿರುಗಾಳಿಯಿಂದ ಅಡಿಕೆ ಹಾಗೂ ರಬ್ಬರ್ ಕೃಷಿಗೂ ವ್ಯಾಪಕವಾಗಿ ಹಾನಿ ಸಂಭವಿಸಿದೆ. ನೂರಾರು ಸಂಖ್ಯೆಯಲ್ಲಿ ಅಡಿಕೆ ಹಾಗೂ ರಬ್ಬರ್ ಮರಗಳು ಮುರಿದು ಬಿದ್ದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ನೆರಿಯದಲ್ಲಿ ಮರ ಬಿದ್ದು ಮೂರು ಮನೆಗಳಿಗೂ ಹಾನಿ ಸಂಭವಿಸಿದೆ. ವ್ಯಾಪಕವಾಗಿ ಹಾನಿ ಸಂಭವಿಸಿರುವ ನೆರಿಯ ಗ್ರಾಮದಲ್ಲಿ ಗ್ರಾಮ ಪಂಚಾಯತ್, ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ನೇತೃತ್ವದಲ್ಲಿ ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸಂಭವಿಸಿದ ಹಾನಿಗಳ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ತಾಲೂಕಿನ ಇತರೆಡೆಗಳಲ್ಲೂ ಗಾಳಿಯ ಅಬ್ಬರ ಜೋರಾಗಿದ್ದು, ಪಟ್ರಮೆಯಲ್ಲಿ ನಾಲ್ಕು ಮನೆಗಳಿಗೆ ಹಾನಿ ಸಂಭವಿಸಿದೆ. ಧರ್ಮಸ್ಥಳ, ಕಲ್ಮಂಜ, ಕಳೆಂಜ, ವೇಣೂರು ಗ್ರಾಮಗಳಲ್ಲೂ ಗಾಳಿ-ಮಳೆಗೆ ಮನೆಗಳಿಗೆ ಹಾಗೂ ಕೃಷಿಗೆ ಹಾನಿ ಸಂಭವಿಸಿದೆ. ತಾಲೂಕಿನಲ್ಲಿ ಭಾರೀ ಗಾಳಿ-ಮಳೆ ಮುಂದುವರಿದಿದ್ದು, ಜನರು ಆತಂಕದದಿಂದ ಬದುಕುವಂತಹ ಸ್ಥಿತಿಯಿದೆ. ನೆರಿಯ ಪರಿಸರದಲ್ಲಿ ಸ್ಥಳೀಯವಾಗಿ ಒಂದೆರಡು ಶಾಲೆಗಳಿಗೆ ಶುಕ್ರವಾರ ರಜೆ ಸಾರಲಾಗಿದೆ.