ಬಂಟ್ವಾಳ, ಜು.26(DaijiworldNews/AA): ಅಕ್ರಮವಾಗಿ ಮನೆಯೊಂದರಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಆರೋಪಿಗಳ ಸಹಿತ ಆಟಕ್ಕೆ ಬಳಸಿದ ಹಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ ಘಟನೆ ತಾಲೂಕಿನ ಪಿಲಿಮೊಗ್ರು ಗ್ರಾಮದ ನಡಾಯಿ ಎಂಬಲ್ಲಿ ನಡೆದಿದೆ.
ಶಿವರಾಮ ನಾಯಕ್ (56), ಗೋಪಾಲ (41), ಯೋಗೀಶ ಪ್ರಭು, (46) ಬಂಧಿತ ಆರೋಪಿಗಳು. ಜಯಣ್ಣ ಅಲಿಯಾಸ್ ಜಯಚಂದ್ರ ಬೊಳ್ಳಾರ್ ಎಂಬಾತ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.
ಆರೋಪಿ ಜಯಚಂದ್ರ ಬೊಳ್ಳಾರ್ ಎಂಬಾತನ ಒಡೆತನದ ಪಿಲಿಮೊಗರು ಗ್ರಾಮದ ನಡಾಯಿ ಎಂಬಲ್ಲಿರುವ ಮನೆಯೊಳಗೆ ಇಸ್ಪೀಟ್ ಎಲೆಗಳನ್ನು ಬಳಸಿ ಅಕ್ರಮವಾಗಿ ಈ ಜುಗಾರಿ ಅಡ್ಡೆ ನಡೆಯುತ್ತಿತ್ತು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದ ಪೊಲೀಸರು ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ ಸ್ಥಳದಲ್ಲಿ ದೊರೆತ 28,120 ರೂಪಾಯಿ ನಗದು ಸಹಿತ ಇತರೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.