ಕುಂದಾಪುರ, ಜು.26(DaijiworldNews/AA): ಸಿದ್ದಾಪುರ ಗ್ರಾಮದ ಮಣ್ಣುಂಜೆ ಗಣಪಯ್ಯ ಉಡುಪ ಎಂಬುವವರ 160 ವರ್ಷಗಳಷ್ಟು ಹಳೆಯ ಮನೆಯು ಜುಲೈ 24ರಂದು ರಾತ್ರಿ ಬೀಸಿದ ಭಾರೀ ಗಾಳಿಗೆ ಸಂಪೂರ್ಣ ಕುಸಿದು ಬಿದ್ದಿದೆ. 10 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
85 ವರ್ಷದ ಗಣಪಯ್ಯ, ಅವರ ಪತ್ನಿ ಜಯಲಕ್ಷ್ಮಿ, ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, ಭಾರೀ ಗಾಳಿಯಿಂದಾಗಿ ಗಣಪಯ್ಯ ಮತ್ತು ಅವರ ಇಡೀ ಕುಟುಂಬ ಕೆಲ ದಿನಗಳಿಂದ ಅವರ ಮಗನ ಹತ್ತಿರದ ಮನೆಯಲ್ಲಿ ವಾಸವಾಗಿದ್ದರು. ಹೀಗಾಗಿ ಯಾವುದೇ ಗಾಯ ಅಥವಾ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನು ಕುಸಿದು ಬಿದ್ದ ಮನೆಯೊಳಗೆ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಅಡಿಕೆ ಸಂಪೂರ್ಣ ನಾಶವಾಗಿದೆ. ಇನ್ನು ಅಮೂಲ್ಯವಾದ ಪೂರ್ವಜರ ವಸ್ತುಗಳು, ಪೂಜಾ ಪಾತ್ರೆಗಳು, ದೈನಂದಿನ ಬಳಕೆಯ ವಸ್ತುಗಳು ಮತ್ತು ದಿನಸಿ ವಸ್ತುಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ. ಜೊತೆಗೆ ದನದ ಕೊಟ್ಟಿಗೆಗೂ ಹಾನಿಯಾಗಿದೆ.