ಕಾಪು, ಜು.26(DaijiworldNews/AA): ಅಪ್ರಾಪ್ತ ವಯಸ್ಕ ಯುವತಿಯನ್ನು ಮದುವೆಯಾಗಿ ಮಗುವಿನ ಜನ್ಮಕ್ಕೆ ಕಾರಣನಾದ ಪತಿ ಮತ್ತು ಹೆತ್ತವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಇದೀಗ ಪೋಕ್ಸೋ ಪ್ರಕರಣ ದಾಖಲಾಗಿದೆ.
ಬಿಹಾರ ಮೂಲದ ಚಾಂದನಿ ಕಾತೂನ್ ದೂರುದಾರ ಯುವತಿ. ಚಾಂದನಿಯು ಆಕೆಯ ಪತಿ ಇಂತಿಯಾಜ್ ದೇವನ್ ಹಾಗೂ ತನ್ನ ತಂದೆ ಮೊಹಮ್ಮದ್ ತಯ್ಯಬ್ ರಾಯಿನ್ ಮತ್ತು ತಾಯಿ ಜುಲೇಖಾ ಖಾತೂನ್ ವಿರುದ್ಧ ದೂರೂ ದಾಖಲಿಸಿದ್ದಾರೆ.
ಚಾಂದಿನಿ ಅವರಿಗೆ 16 ವರ್ಷ ತುಂಬಿದ್ದ ವೇಳೆ 2022 ಜೂನ್ 12ರಂದು ಇಂತಿಯಾಜ್ ದೇವನ್ ಗೆ ಆಕೆಯ ಹೆತ್ತವರು ಮದುವೆ ಮಾಡಿ ಕೊಟ್ಟಿದ್ದರು. ಬಳಿಕ ಪತಿಯೊಂದಿಗೆ ವಾಸವಿದ್ದ ಆಕೆಯು 2023 ಏಪ್ರಿಲ್ 4 ರಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ.
ಬಳಿಕ ಮಗುವಿನೊಂದಿಗೆ ಚಾಂದಿನಿ ಹಾಗೂ ಆಕೆಯ ಪತಿ ಉದ್ಯಾವರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ವೇಳೆ ಚಾಂದನಿ ಮತ್ತೆ ಗರ್ಭಿಣಿಯಾಗಿದ್ದು, ಆಕೆಗೆ ಜು. 13ರಂದು ಹೊಟ್ಟೆ ನೋವು ಕಾಣಿಸಿಕೊಂಡಿದೆ. ಚಿಕಿತ್ಸೆಗೆಂದು ಮಂಗಳೂರು ಆಸ್ಪತ್ರೆಗೆಂದು ದಾಖಲು ಮಾಡಿದ್ದ ವೇಳೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಿಸಿರುವುದು ಬೆಳಕಿಗೆ ಬಂದಿದೆ.
ಇನ್ನು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಕಾಪು ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.