ಬೆಳ್ತಂಗಡಿ, ಮೇ17(Daijiworld News/SS): ಇತಿಹಾಸ ಪ್ರಸಿದ್ಧ ಶ್ರೀ ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿಯೂ ನೀರಿಗೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ, ಭಕ್ತ ಜನ ತಮ್ಮ ಪ್ರವಾಸವನ್ನು ಸ್ವಲ್ಪ ಕಾಲ ಮುಂದೂಡಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಮಾಧ್ಯಮ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.
ಕ್ಷೇತ್ರದಲ್ಲಿ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಧರ್ಮಸ್ಥಳದ ಪಕ್ಕದಲ್ಲೇ ಹರಿಯುವ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಕಡಿಮೆಯಾಗಿದೆ. ಪುಣ್ಯಕ್ಷೇತ್ರದ ದರ್ಶನಕ್ಕೆ ಬರುವ ಭಕ್ತರ ಅಗತ್ಯಕ್ಕೆ ತಕ್ಕಂತೆ ನೀರನ್ನು ಒದಗಿಸಲು ಸಾದ್ಯವಾಗುತ್ತಿಲ್ಲ. ಹೀಗಾಗಿ ಭಕ್ತ ಜನ ತಮ್ಮ ಪ್ರವಾಸವನ್ನು ಸ್ವಲ್ಪ ಕಾಲ ಮುಂದೂಡಿ ಎಂದು ಮನವಿ ಮಾಡಿದ್ದಾರೆ.
ಕೇವಲ ಧರ್ಮಸ್ಥಳ ಮಾತ್ರವಲ್ಲದೆ, ಜಿಲ್ಲೆಯ ಅನೇಕ ದೇವಾಲಯಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ಕರಾವಳಿಯಲ್ಲಿ ನೀರಿನ ಸಮಸ್ಯೆ ತಲೆದೋರಿರುವ ಹಿನ್ನೆಲೆ ಜನ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಈ ನಡುವೆ ಕಳೆದೆರಡು ದಿನಗಳ ಹಿಂದೆ ಶ್ರೀ ಕ್ಷೇತ್ರ ಕದ್ರಿಯಲ್ಲಿ ಮಳೆಗಾಗಿ ಸೀಯಳಾಭಿಷೇಕ ನೆರವೇರಿಸಲಾಗಿದೆ. ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಕಲ್ಕೂರ ಪ್ರತಿಷ್ಠಾನ, ಸ್ಥಳೀಯರು ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೀಯಾಳಾಭಿಷೇಕ ನೆರವೇರಿಸಿದ್ದು, ಶೀಘ್ರ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ.