ಉಡುಪಿ, ಜು 25(DaijiworldNews/ AK):ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್, ವಿಕಸಿತ ಭಾರತಕ್ಕೆ ರೋಡ್ ಮ್ಯಾಪ್ ಆಗಿದೆ. ಆದರೆ, ಇದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ನಾಯಕರು ಸತ್ಯ ಮುಚ್ಚಿಟ್ಟು ಟೀಕಿಸುವ ಕೆಲಸ ಮಾಡುತ್ತಿರುವುದು ದುರಂತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಕಿಶೋರ್ ಕುಮಾರ್, ಕರ್ನಾಟಕಕ್ಕೆ ಯಾವುದೇ ಅನುದಾನ ನೀಡಿಲ್ಲ ಎಂದು ಇಲ್ಲಿನ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಆದರೆ, ಇದು ಸಮಗ್ರ ಭಾರತದ ಬಜೆಟ್ ಎನ್ನುವುದೂ ಅವರಿಗೆ ತಿಳಿದಿಲ್ಲ ಎಂದರು.
ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ದಿವಾಕರ ಶೆಟ್ಟಿ ಮಾತನಾಡಿ, 2047ರಲ್ಲಿ ಭಾರತ ಹೇಗಿರಬೇಕು ಎಂಬ ಹಿನ್ನೆಲೆಯ ಬಜೆಟ್ ಇದಾಗಿದೆ. ಬಡವರು, ಯುವಕರು, ಮಹಿಳೆಯರು ಮತ್ತು ರೈತರನ್ನು ಆಧಾರವಾಗಿಸಿ ಹಾಗೂ 9 ವಿಶೇಷ ಆದ್ಯತಾ ವಲಯಗಳಿಗೆ ಮಹತ್ವ ಕೊಡಲಾಗಿದೆ. 10 ವರ್ಷದ ಹಿಂದೆ ಭಾರತದ ಬಜೆಟ್ 15.00 ಲಕ್ಷ ಕೋಟಿ ಇತ್ತು. ಈ ಬಾರಿ 48.60 ಲಕ್ಷ ಕೋಟಿಯ ಬಜೆಟ್ ನೀಡಲಾಗಿದೆ. ದೇಶದ ಎಲ್ಲ ಜಾಗ ಸರ್ವೇ ಮಾಡಿ, ಡಿಜಿಟಲೀಕರಣದೊಂದಿಗೆ ಭೂ ಆಧಾರ್ ಕಾರ್ಡ್ ನೀಡುವುದು ಮಹತ್ವದ ಯೋಜನೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರ.ಕಾರ್ಯದರ್ಶಿ ದಿನಕರ್ ಶೆಟ್ಟಿ ಹೆರ್ಗ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕುಂದರ್ ಜೆ ಬಿ, ಜಿಲ್ಲಾ ಮಾಧ್ಯಮ ವಕ್ತಾರ ವಿಜಯಕುಮಾರ್ ಉದ್ಯಾವರ, ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಮತ್ತಿತರರು ಉಪಸ್ಥಿತರಿದ್ದರು.