ಬಂಟ್ವಾಳ, ಮೇ17(Daijiworld News/SS): ಕರಾವಳಿಯಲ್ಲಿ ಗತ ಕಾಲದ ಇತಿಹಾಸವನ್ನು ಸಾರುವ ಭವ್ಯವಾದ ಗರಡಿಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಕ್ಯಪದವು ಎಂಬಲ್ಲಿ ನಿರ್ಮಾಣವಾಗಿದ್ದು, ಇದೀಗ ಕ್ಷೇತ್ರದಲ್ಲಿ ವೈಭವದಿಂದ ಬ್ರಹ್ಮಕಲಶೋತ್ಸವ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉಳಿ ಗ್ರಾಮದಲ್ಲಿರುವ ಕಕ್ಯಪದವು ಎಂಬಲ್ಲಿ ಈ ಗರಡಿ ನಿರ್ಮಾಣವಾಗಿದ್ದು, ಬ್ರಹ್ಮಕಲಶೋತ್ಸವದ ವೈದಿಕ ವಿಧಿ - ವಿಧಾನಗಳು ಆರಂಭವಾಗಿದೆ. ಅಂದಾಜು 3 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಕಕ್ಯಪದವು ಗರಡಿ ಕ್ಷೇತ್ರ ಪುನರ್ನಿಮಾಣಗೊಂಡಿದೆ.
ಟೀಂ ಗರಡಿ ಕಕ್ಕೆಪದವು ಸಂಘಟನೆ ಸೇರಿದಂತೆ ಊರಪರವೂರ ಭಕ್ತವೃಂದ ಪುನರ್ ನಿರ್ಮಾಣದ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಇದೀಗ ಬ್ರಹ್ಮಕಲಶೋತ್ಸವದ ವೈದಿಕ ವಿಧಿ - ವಿಧಾನಗಳು ಆರಂಭವಾಗಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತ ಜನ ಕ್ಷೇತ್ರದತ್ತ ಧಾವಿಸಿ ಬರುತ್ತಿದ್ದಾರೆ.
ಕಕ್ಯಪದವು ಗರಡಿ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದ್ದು, ಉಳಿ, ಮಣಿನಾಲ್ಕೂರು, ಸರಪಾಡಿ, ಕಾವಳಮೂಡೂರು, ದೇವಸ್ಯಪಡೂರು, ತೆಂಕಕಜೆಕಾರು, ಪುತ್ತಿಲ, ಬಾರ್ಯ, ತೆಕ್ಕಾರು ಗ್ರಾಮಗಳ ವ್ಯಾಪ್ತಿಯ ಭಕ್ತರ ಸಹಿತ ಊರಪರವೂರ ಅಪಾರ ಭಕ್ತಾದಿಗಳ ಆರಾಧನಾಲಯವಾಗಿ ಪ್ರಸಿದ್ಧಿ ಪಡೆದಿದೆ.
ಕ್ಷೇತ್ರದಲ್ಲಿ ಬೆರ್ಮೆರ್, ಕೋಟಿ ಚೆನ್ನಯರ ಜತೆಯಲ್ಲಿ ಪ್ರಧಾನ ಶಕ್ತಿಗಳಾಗಿ ಗ್ರಾಮದೈವ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ದೈವೊಂಕುಲು, ಮಾಯಂದಾಲ್ ನೆಲೆಯಾಗಿ ಭಕ್ತರನ್ನು ಹರಸುತ್ತಿದ್ದಾರೆ.
ತಾಂತ್ರಿಕ ತಜ್ಞ ಪ್ರಮಲ್ ಕುಮಾರ್ ಕಾರ್ಕಳ ಮತ್ತು ವಾಸ್ತುಶಿಲ್ಪಿ ಸದಾಶಿವ ಗುಡಿಗಾರ್ ಅವರ ಮಾರ್ಗದರ್ಶನದಲ್ಲಿ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ಗರಡಿ ಕ್ಷೇತ್ರ ಭವ್ಯವಾಗಿ ನಿರ್ಮಾಣಗೊಂಡಿದ್ದು, ಪ್ರತಿಷ್ಠೆ, ಬ್ರಹ್ಮಕಲಾಶಾಧಿಗಳ ವಿಧಿ - ವಿಧಾನಗಳು ಬಹಳ ವೈಭವದಿಂದ ಆರಂಭಗೊಂಡಿದೆ.