ಉಡುಪಿ, ಜು.24(DaijiworldNews/AA): ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್ ಸಮಯ ಪ್ರಜ್ಞೆಯಿಂದ ಬಾರ್ಕೂರು-ಉಡುಪಿ ಮಧ್ಯೆ ಸಂಭವನೀಯ ಭಾರೀ ರೈಲು ಅಪಘಾತವೊಂದು ತಪ್ಪಿದೆ. ಇದೀಗ ಪ್ರಯಾಣಿಕರನ್ನು ರಕ್ಷಿಸಿದ ಸಿಬ್ಬಂದಿಗೆ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಗದು ಬಹುಮಾನ ಘೋಷಿಸಿದೆ.
ರೈಲು ಸಂಖ್ಯೆ 12619 ಮತ್ಸ್ಯಗಂಧ ಎಕ್ಸ್ಪ್ರೆಸ್ ಬಾರ್ಕೂರು-ಉಡುಪಿ ಸೆಕ್ಷನ್ ಮಧ್ಯೆ ಚಲಿಸುತ್ತಿದ್ದಾಗ ಹಳಿಗೆ ಅಡ್ಡಲಾಗಿ ದೊಡ್ಡ ಮರವೊಂದು ಬಿದ್ದಿರುವುದನ್ನು ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್ ಗಮನಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಅವರು ತುರ್ತು ಬ್ರೇಕ್ ಹಾಕಿದ್ದಾರೆ. ಹೀಗಾಗಿ ಲೊಕೊಮೊಟಿವ್ ಮತ್ತು ಒಂದು ಕೋಚ್ ಹಾದು ಹೋಗುವಷ್ಟರಲ್ಲಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮ ಸಂಭವನೀಯ ಭಾರೀ ಅನಾಹುತ ತಪ್ಪಿದೆ.
ನಂತರ ಟ್ರಾö್ಯಕ್ ಮೇಲೆ ಬಿದ್ದಿದ್ದ ಮರವನ್ನು ಓವರ್ಹೆಡ್ ಉಪಕರಣ (ಒಹೆಚ್ಇ) ತಂಡವು ತೆರವುಗೊಳಿಸಿತು. ಬಳಿಕ ರೈಲು ಪ್ರಯಾಣ ಪುನರಾರಂಭಗೊಂಡಿತು. ಸಂಭವನೀಯ ಭಾರಿ ಅನಾಹುತವನ್ನು ತಪ್ಪಿಸಿದ ಸಿಬ್ಬಂದಿಯನ್ನು ಗುರುತಿಸಿ, ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ಸಿಎಂಡಿ ಸಂತೋಷ್ ಕುಮಾರ್ ಝಾ ಸಿಬ್ಬಂದಿಗೆ ತಲಾ 15,000 ರೂಪಾಯಿಗಳ ನಗದು ಬಹುಮಾನವನ್ನು ಘೋಷಿಸಿದ್ದಾರೆ.