ಬಂಟ್ವಾಳ, ಜು.24(DaijiworldNews/AA): ರಾತ್ರಿ ಬೀಸಿದ ಗಾಳಿಗೆ ಬಿಸಿರೋಡಿನ ಕೆಲವು ಭಾಗದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಾನಿಯಾದ ಘಟನೆ ನಡೆದಿದೆ. ಬಿಸಿರೋಡಿನ ಸರ್ಕಲ್ ಸಹಿತ ಅನೇಕ ಭಾಗದಲ್ಲಿ ವಿದ್ಯುತ್ ಕಂಬ ಹಾಗೂ ಮರಗಳು ಉರುಳಿಬಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಂಗಳವಾರ ರಾತ್ರಿ ಸುಮಾರು 9.30ರ ವೇಳೆ ಭಾರಿ ಗಾಳಿ ಮಳೆಯಾಗಿದ್ದು, ಇದರಿಂದ ಬಿ.ಸಿ.ರೋಡ್ ಸರ್ಕಲ್ ಬಳಿ ಸಹಿತ ಹಲವೆಡೆ ಒಟ್ಟು 5 ವಿದ್ಯುತ್ ಕಂಬಗಳು ಉರುಳಿಬಿದ್ದು ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರ ಬಳಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಅನಾಹುತವನ್ನೇ ಉಂಟುಮಾಡಿದೆ.
ಬಿ.ಸಿ.ರೋಡ್ ಪೃಥ್ವಿ ನರ್ಸಿಂಗ್ ಹೋಂ ಗೆ ತೆರಳುವ ಮಾರ್ಗದಲ್ಲಿ 2, ಸರ್ಕಲ್ ಬಳಿ 3 ಒಟ್ಟು 5 ವಿದ್ಯುತ್ ಕಂಬಗಳು ಉರುಳಿವೆ. ಈ ಘಟನೆಯಿಂದ ಯಾರಿಗೂ ಪ್ರಾಣಹಾನಿ ಆಗಿಲ್ಲ. ಆದರೆ ದಿಢೀರನೆ ನಡೆದ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆ ಉಂಟಾದವು.
ಬಿ.ಸಿ.ರೋಡ್ ಟ್ಯಾಕ್ಸಿ ನಿಲ್ಲುವ ಜಾಗದಲ್ಲಿ ಪೊಲೀಸ್ ಸ್ಟೇಶನ್ ಗೆ ತೆರಳುವ ಮಾರ್ಗ ಎಂಬ ನಾಮಫಲಕವನ್ನು ಗಾಳಿ ಉರುಳಿಸಿದರೆ, ಮುಂದಕ್ಕೆ ಹಿಂದಿನ ಬಿಡಿಒ ಕಚೇರಿ ಇದ್ದ ಜಾಗದಲ್ಲಿ ನಿಲುಗಡೆಯಾಗಿರುವ ಮಾರುತಿ ಝೆನ್ ಕಾರಿನ ಮೇಲೆ ಮರದ ಗೆಲ್ಲುಗಳು ಕವುಚಿ ಬಿದ್ದಿವೆ. ಘಟನೆ ನಡೆದ ಕೂಡಲೇ ಕಂದಾಯ, ಅಗ್ನಿಶಾಮಕ, ಮೆಸ್ಕಾಂ ಸಹಿತ ವಿವಿಧ ಇಲಾಖಾಧಿಕಾರಿಗಳು, ಸಾರ್ವಜನಿಕರು ಸೇರಿ ತತ್ ಕ್ಷಣದ ಕ್ರಮಗಳನ್ನು ಕೈಗೊಂಡರು. ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬಂಟ್ವಾಳ ಪೊಲೀಸ್ ಸಿಬಂದಿ ಸಾರ್ವಜನಿಕರ ಸಹಾಯದಿಂದ ನಿಯಂತ್ರಣಕ್ಕೆ ತಂದರು.
ಈಗಾಗಲೇ ಪಾಕೃತಿಕ ವಿಕೋಪಕ್ಕೆ ಬಿಸಿರೋಡಿನ ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬ ಹಾಗೂ ವಯರ್ ಗಳು ತುಂಡಾಗಿ ಬಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಇದರ ಸ್ಪಷ್ಟವಾದ ಚಿತ್ರಣ ಸಿಕ್ಕಿದ ಮೇಲೆ ನಿಗದಿತವಾದ ಬೆಲೆ ಗೊತ್ತಾಗಬಹುದು. ಘಟನೆಯಿಂದ ಗೂಡಿನ ಬಳಿ ಬಿಸಿರೋಡಿನ ಪಟ್ಟಣದ ವಿವೇಕನಗರ, ಪೋಲೀಸ್ ಲೈನ್ ಹೀಗೆ ಕೆಲವೊಂದು ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ನಾರಾಯಣ ಭಟ್ ಅವರು ತಿಳಿಸಿದ್ದಾರೆ.
ದೊಡ್ಡಪ್ರಮಾಣದಲ್ಲಿ ಅನಾಹುತಗಳು ನಡೆದಿದೆಯಾದರಿಂದ ತುರ್ತಾಗಿ ರಿಪೇರಿ ಸಾಧ್ಯವಾಗಿಲ್ಲ. ರಾತ್ರಿಯಿಂದಲೇ ಮೆಸ್ಕಾಂ ಇಲಾಖೆ ಸರಿಪಡಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಇವರ ಜೊತೆ ಖಾಸಗಿ ಕಂಪೆನಿಯನ್ನು ಕರೆಸಿಕೊಂಡು ಕಾಮಗಾರಿಗೆ ಚುರುಕು ನೀಡಿದ್ದೇವೆ. ಇಂದು ಸಂಜೆಯೊಳಗೆಎಲ್ಲಾ ಮುರಿದಕಂಬಗಳ ಬದಲಾಗಿ ಕಂಬಗಳನ್ನು ಅಳವಡಿಸಿ ವಿದ್ಯುತ್ ತಂತಿಗಳನ್ನು ಹಾಕಿ ಸರಿಪಡಿಸಿ ಜನರಿಗೆ ತೊಂದರೆಯಾಗದಂತೆ ಕರೆಂಟ್ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಅಪಾಯಕಾರಿ ಬ್ಯಾನರ್, ಮರದ ಗೆಲ್ಲು: ಅಧಿಕಾರಿಗಳೇ ಇತ್ತ ಚಿತ್ತ ಹರಿಸಿ
ರಸ್ತೆ ಬದಿಯಲ್ಲಿ ಅಪಾಯಕಾರಿಯಾಗಿ ಬ್ಯಾನರ್ ಅಳವಡಿಕೆಗೆ ಇಲಾಖೆ ಅವಕಾಶ ಕಲ್ಪಿಸಿದ ಪರಿಣಾಮವಾಗಿ ನಿನ್ನೆ ರಾತ್ರಿ ಗಾಳಿಗೆ ಸರ್ಕಲ್ ಬಳಿ ಹಾಕಲಾಗಿರುವ ಅನೇಕ ಬ್ಯಾನರ್ ಗಳು ರಸ್ತೆಗೆ ಉರುಳಿಬಿದ್ದಿವೆ. ಅದೃಷ್ಟವಶಾತ್ ಆ ಸಮಯದಲ್ಲಿ ಬೈಕ್ ಅಥವಾ ಇತರೆ ವಾಹನಗಳು ಸಂಚಾರ ಮಾಡುತ್ತಿದ್ದರೆ ಜೀವಕ್ಕೆ ಹಾನಿಯಾಗುವ ಸಂಭವವಿತ್ತು. ಇದೇ ರೀತಿ ರಸ್ತೆ ಬದಿಯ ಮರದಗೆಲ್ಲುಗಳನ್ನು ಮಳೆಗಾಲದಲ್ಲಿ ಕಡಿಯುವ ಕೆಲಸವಾಗಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.