ಕುಂದಾಪುರ,ಮೇ 17(Daijiworld News/MSP): ಕೆಲಸಕ್ಕೆಂದು ವಲಸೆ ಬಂದಿದ್ದ ಯುವಕನೊಬ್ಬ ಕೆಲಸದ ಮನೆಯಲ್ಲಿದ್ದ ಏನೂ ಅರಿಯದ ಐದು ವರ್ಷ ಪ್ರಾಯದ ಹೆಣ್ಣು ಮಗುವಿಗೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಗಂಗೊಳ್ಳಿಯಲ್ಲಿ ಮೇ 16ರ ಗುರುವಾರ ಮಧ್ಯಾಹ್ನ ನಡೆದಿದೆ. ಅತ್ಯಾಚಾರಕ್ಕೆ ಯತ್ನಿಸಿ ನಾಪತ್ತೆಯಾಗಿದ್ದ ಆರೋಪಿಯನ್ನು ರಾಜಸ್ಥಾನ ಮೂಲದ ಬಿಸ್ನೋಯ್(21) ಎಂದು ಗುರುತಿಸಲಾಗಿದ್ದು ಆರೋಪಿಯನ್ನು ಗಂಗೊಳ್ಳಿ ಪೊಲೀಸರು ತಡರಾತ್ರಿಯೇ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಪ್ರಕಾಶ್ ಬಿಸ್ನೋಯ್ ಗ್ರಿಲ್ಲಿಂಗ್ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಗುರುವಾರ ಮಧ್ಯಾಹ್ನ ಗಂಗೊಳ್ಳಿ ಮನೆಯೊಂದರಲ್ಲಿ ಗ್ರಿಲ್ಲಿಂಗ್ ಮಾಡುತ್ತಿದ್ದ ವೇಳೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಐದು ವರ್ಷ ಪ್ರಾಯದ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಅತ್ಯಾಚಾರಕ್ಕೂ ಯತ್ನಿಸಿದ್ದು ಮನೆಯವರಿಗೆ ಗೊತ್ತಾಗಿತ್ತೆನ್ನಲಾಗಿದೆ. ಘಟನೆಯ ಬಗ್ಗೆ ಮಗುವಿನ ಮನೆಯವರು ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಗುರುವಾರ ತಡ ರಾತ್ರಿ ಪೊಲೀಸರು ಬಂಧಿಸಿದ್ದು, ಶುಕ್ರವಾರ ಸಂಜೆ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗೆ ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.