ಮಂಗಳೂರು, ಜು.24(DaijiworldNews/AA): ಲಕ್ಷಾಂತರ ರೂಪಾಯಿ ಬೆಲೆಬಾಳುವ ತಲಾ 25 ಕೆ.ಜಿ. ತೂಕದ 50 ಪೊಲಿಪ್ರೊಪೆಲಿನ್ ಬ್ಯಾಗ್ಗಳು ತಣ್ಣೀರುಬಾವಿ ಬೀಚ್ನಲ್ಲಿ ಪತ್ತೆಯಾಗಿದೆ.
ಪೊಲಿಪ್ರೊಪೆಲಿನ್ ಕೆ.ಜಿ.ಗೆ ನೂರು ರೂಪಾಯಿ ದರವಿದ್ದು, ಪತ್ತೆಯಾಗಿರುವ 50 ಪೊಲಿಪ್ರೊಪೆಲಿನ್ ಬ್ಯಾಗ್ಗಳು ತಲಾ 25 ಕೆ.ಜಿ. ತೂಗುತ್ತಿವೆ. ಹೀಗಾಗಿ ಒಂದೊಂದು ಬ್ಯಾಗ್ನ ಮೌಲ್ಯವು 2,500 ರೂ. ಇದ್ದು, ಈ ಪ್ರಕಾರ 50 ಬ್ಯಾಗ್ಗಳ ಮೌಲ್ಯವು 1.25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಂಗಳವಾರ ಮುಂಜಾನೆ ಸಮುದ್ರ ತೀರದಲ್ಲಿ ಈ ಬ್ಯಾಗ್ ಪತ್ತೆಯಾಗಿರುವ ಬಗ್ಗೆ ಬೀಚ್ ನಿರ್ವಹಣೆ ಮಾಡುವ ಪದ್ಮನಾಭ್ ಪಣಿಕ್ಕರ್ ಅವರು ಪಣಂಬೂರು ಪೊಲೀಸರಿಗೆ ತಿಳಿಸಿದ್ದಾರೆ. ಬ್ಯಾಗ್ಗಳನ್ನು ಪರಿಶೀಲಿಸಿದಾಗ ರಿಲಾಯನ್ಸ್ ಸಂಸ್ಥೆಗೆ ಸೇರಿದ ಕಚ್ಚಾ ಸರಕು ಎಂದು ಗುರುತಿಸಲಾಗಿದೆ.
ಪೆಟ್ರೋಕೆಮಿಕಲ್ಸ್ ಉತ್ಪನ್ನವಾಗಿರುವ ಪೊಲಿಪ್ರೊಪೆಲಿನ್ ಪ್ಲಾಸ್ಟಿಕ್, ಔಷಧ ಸಹಿತ ವಿವಿಧ ಉತ್ಪನ್ನಗಳಿಗೆ ಬಳಕೆ ಮಾಡಲಾಗುತ್ತದೆ.