ಪುಂಜಾಲಕಟ್ಟೆ, ಜು 23(DaijiworldNews/ AK): ದೈವಗಳ ಕಾರಣಿಕದಿಂದ ಸಂಭವಿಸಬಹುದಾದ ಬಹು ದೊಡ್ಡ ಅಪಾಯ ತಪ್ಪಿದ ಘಟನೆ ಸಿದ್ದಕಟ್ಟೆ ಸಮೀಪದ ಕೊನೆರಬೆಟ್ಟುನಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿದ್ದಕಟ್ಟೆ ಬಂಟರ ಸಂಘದ ವತಿಯಿಂದ ಕೆಸರುಗದ್ದೆ ಕ್ರೀಡಾ ಕೂಟ ಆಯೋಜಿಸುತ್ತಿದ್ದು , ಪ್ರತೀ ವರ್ಷ ದಂತೆ ಕೆಸರು ಗದ್ದೆ ಕೂಟದ ಮೊದಲು ಕೊನೆರಬೆಟ್ಟು ಸ್ಥಳ ದೈವಗಳಿಗೆ ಪರ್ವ ನಡೆಸಿ ಪ್ರಾರ್ಥನೆ ಮಾಡುವುದು ವಾಡಿಕೆ.
ಈ ಬಾರಿಯೂ ರವಿವಾರ ಕೆಸರು ಗದ್ದೆ ಕೂಟದ ಮೊದಲು ಪ್ರಾರ್ಥನೆ ಸಲ್ಲಿಸಲಾಗಿತ್ತು.ಕ್ರೀಡಾಕೂಟ ನಡೆಯುವ ಗದ್ದೆಯ ಮೇಲ್ಭಾಗದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿತ್ತು.ಇದನ್ನು ಕಂಡ ಆಯೋಜಕರು ಕ್ರೀಡಾಕೂಟದಲ್ಲಿ ವಾಲಿಬಾಲ್ ಮೊದಲಾದ ಪಂದ್ಯಾಟಗಳಿರುವ ಕಾರಣ ಕ್ರೀಡಾ ಕೂಟ ನಡೆಸುವ ದಿನ ಈ ಲೈನ್ ಸ್ಥಗಿತಗೊಳಿಸುವಂತೆ ಮೆಸ್ಕಾಂ ಇಲಾಖೆಗೆ ಮನವಿ ಮಾಡಿ ಲೈನ್ ಕಟ್ ಮಾಡಿಸಿದ್ದರು.
ವಿಚಿತ್ರವೆಂದರೆ ರವಿವಾರ ಕ್ರೀಡಾ ಕೂಟ ನಡೆಯುವಾಗ ಭಾರೀ ಗಾಳಿ ಬೀಸಿ ವಿದ್ಯುತ್ ಕಂಬ ತುಂಡಾಗಿ ತಂತಿ ಸಹಿತ ಗದ್ದೆಗೆ ಬಿದ್ದಿದೆ. ಗದ್ದೆಯಲ್ಲಿ ಮಕ್ಕಳ ಸಹಿತ ಸುಮಾರು ಐನೂರರಷ್ಟು ಜನ ಸೇರಿದ್ದರು. ಆದರೆ ಮೊದಲೇ ಲೈನ್ ಕಟ್ ಮಾಡಿದ್ದುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಆಯೋಜಕರಿಗೆ ಜಾಗದ ದೈವ ಗಳು ಮೊದಲೇ ಸೂಚನೆ ನೀಡಿದ್ದಿರಬಹುದು.ತುಳುನಾಡಿನ ದೈವದ ಕಾರಣಿಕ ಇರುವುದಕ್ಕೆ ಇದು ಸ್ಪಷ್ಟ ನಿದರ್ಶನವೆಂದು ಆಯೋಜಕರು ತಿಳಿಸಿದ್ದಾರೆ. ಈ ಘಟನೆ ಇದೀಗ ಸಾಕಷ್ಟು ವೈರಲ್ ಆಗಿದೆ.