ಉಪ್ಪಿನಂಗಡಿ, ಮೇ17(Daijiworld News/SS): ಇಲ್ಲಿನ ಉಪ್ಪಿನಂಗಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಸೇತುವೆ ಮೇಲೆ ಗೋ ಮಾಂಸ ಪತ್ತೆಯಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೇವಲ ಹೆದ್ದಾರಿ ಸೇತುವೆ ಮೇಲೆ ಮಾತ್ರವಲ್ಲದೆ, ಪವಿತ್ರ ತೀರ್ಥ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಸಮೀಪದ ನದಿಯಲ್ಲೂ ಮಾಂಸದ ತುಂಡುಗಳು ಪತ್ತೆಯಾಗಿದೆ.
ಉಪ್ಪಿನಂಗಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಸೇತುವೆ ಮೇಲೆ ಗೋವಿನ ಮಾಂಸ, ಕೊಂಬು ಹಾಗೂ ಕಾಲುಗಳು ರಸ್ತೆಬದಿಯಲ್ಲೇ ಬಿದ್ದಿದ್ದು, ಸೇತುವೆ ಕೆಳಗೆ ಗೋವಿನ ಕೊಂಬು ಸೇರಿದಂತೆ ಮಾಂಸದ ತುಣುಕುಗಳ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ.
ಪುತ್ತೂರಿಗೆ ನೀರು ಸರಬರಾಜು ಮಾಡುವ ನೆಕ್ಕಿಲಾಡಿ ಡ್ಯಾಂ ಸೋರಿಕೆ ಪರಿಣಾಮ ಸೇತುವೆ ಕೆಳಭಾಗದಲ್ಲಿ ನೀರಿನ ಹರಿಯುವಿಕೆ ಪ್ರಮಾಣ ಅಧಿಕವಾಗಿದೆ. ಹರಿಯುವ ನೀರಿನಲ್ಲಿ ಗೋಮಾಂಸದ ತ್ಯಾಜ್ಯ ಬಿಸಾಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ನೇತ್ರಾವತಿ ಹಾಗೂ ಕುಮಾರಾಧಾರ ನದಿ ಸೇರುವ ಪ್ರದೇಶದಲ್ಲಿ ಸ್ವಚ್ಛತೆಗೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರ ಪ್ರಕಾರ ಉಪ್ಪಿನಂಗಡಿ ವ್ಯಾಪ್ತಿಯ ಕಸಾಯಿ ಖಾನೆ ಹಾಗೂ ಕೋಳಿ ಅಂಗಡಿಗಳ ಮಾಂಸ ತ್ಯಾಜ್ಯವನ್ನು ಇದೇ ಪ್ರದೇಶದಲ್ಲಿ ವಿಲೇ ಮಾಡಲಾಗುತ್ತಿದ್ದರೂ ಪೊಲೀಸರು ಹಾಗೂ ಗ್ರಾಪಂ ಈ ಬಗ್ಗೆ ಮೌನವಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.