ಮಂಗಳೂರು, ನ 24: ರಂಗಭೂಮಿಯ ಅನೇಕ ಕಲಾವಿದರು ಸೇರಿದಂತೆ ಯುವ ಪ್ರತಿಭೆಗಳನ್ನು ಒಟ್ಟು ಸೇರಿಸಿ ನಿರ್ಮಿಸಿರುವ ಅಂಬರ್ ಕ್ಯಾಟರರ್ಸ್ ಚಿತ್ರಕ್ಕೆ ನಗರದ ಜ್ಯೋತಿ ಟಾಕೀಸ್ ನಲ್ಲಿ ಆಟೋ ಚಾಲಕರು ಚಾಲನೆ ನೀಡಿದ್ದಾರೆ.
ಕನ್ನಡ ಹಾಗೂ ತುಳು ಸೇರಿದಂತೆ ಅನೇಕ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಜೈ ಪ್ರಸಾದ್ ಬಜಾಲ್ ಅವರ ನಿರ್ದೇಶನದ ಚೊಚ್ಚಲ ಚಿತ್ರ ಅಂಬರ್ ಕ್ಯಾಟರರ್ಸ್ ಇಂದು ತೆರೆ ಕಂಡಿದ್ದು, ಪ್ರೇಕ್ಷಕರಿಗೆ ಮನೋರಂಜನೆಯ ಜೊತೆಗೆ ಉತ್ತಮ ಸಂದೇಶವನ್ನು ಈ ಚಿತ್ರ ನೀಡಲಿದೆ.
ಸಿ-ಟೌನ್ ನಲ್ಲಿ ಬಹು ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಬೇರೆಲ್ಲಾ ತುಳು ಸಿನೆಮಾಗಳಿಗೆ ಹೋಲಿಸಿದಾಗ ದೊಡ್ಡ ಬಜೆಟ್ ನ ಚಿತ್ರವಾಗಿದೆ. ನಾಗೇಶ್ವರ ಸಿನಿ ಕಂಬೈನ್ಸ್ ಲಾಂಛನದ ಪ್ರಸ್ತುತಿಯಲ್ಲಿ ಈ ಚಿತ್ರ ಸಿದ್ಧಗೊಂಡಿದ್ದು, ತುಳುನಾಡಿನ, ತುಳುವರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉತ್ತಮ ಚಿತ್ರವಾಗಿದೆ. ಚಿತ್ರಕಥೆ ಅದ್ಭುತವಾಗಿ ಮೂಡಿಬಂದಿದ್ದು, ಹಾಸ್ಯದ ಜೊತೆಗೆ ಪ್ರೇಮಕಥೆಯನ್ನು ಬಹಳ ಸುಂದರವಾಗಿ ಚಿತ್ರದಲ್ಲಿ ಎಣೆದು ತೋರಿಸಿದ್ದಾರೆ.
ಅಂಬರ್ ಕ್ಯಾಟರರ್ಸ್ ಚಿತ್ರದಲ್ಲಿ ನಾಯಕ ನಟನಾಗಿ ಸೌರಭ್ ಭಂಡಾರಿ ಕಾಣಿಸಿಕೊಂಡರೆ, ನಾಯಕಿಯಾಗಿ ಸಿಂಧೂ ಲೋಕನಾಥ್ ತೆರೆ ಮೇಲೆ ಮಿಂಚಿದ್ದಾರೆ. ಸ್ಯಾಂಡಲ್ ವುಡ್ ದಿಗ್ಗಜರಾದ ಭಾರತಿ ವಿಷ್ಣುವರ್ಧನ್ ಮತ್ತು ಶರತ್ ಲೋಹಿತಾಶ್ವ ತುಳು ಚಿತ್ರದಲ್ಲಿ ಬಣ್ಣ ಹಚ್ಚಿ ನಟಿಸಿರುವುದು ವಿಶೇಷ. ತುಳುರಂಗಭೂಮಿಯ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಬ್ಯಾಂಕ್ ಜನಾರ್ದನ್ ಹೀಗೆ ಅನೇಕ ಕಲಾವಿದರು ನಟನೆಯ ಮೂಲಕ ಚಿತ್ರದಲ್ಲಿ ಹಾಸ್ಯದ ಮಳೆ ಸುರಿಸಿದ್ದಾರೆ.
ಈಗಾಗಲೇ ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿದ್ದು, ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಸಾಹಿತ್ಯದಲ್ಲಿ, ಕದ್ರಿ ಮಣಿಕಾಂತ್ ಅವರ ಸಂಗೀತ ಚಿತ್ರದಲ್ಲಿ ಇಂಪಾಗಿ ಮೂಡಿಬಂದಿದೆ. ಆರ್ ಜೆ ವಿಸ್ಮಯ್ ವಿನಾಯಕ್ ಅವರ ಕಂಠದಲ್ಲಿ ಮೂಡಿಬಂದಿರುವ ಲಿಂಗುನ ಪುಲ್ಲಿನ ಹಾಡು ತುಳುವರ ಮನಗೆದ್ದಿದೆ. ಶಂಕರ್ ಮಹಾದೇವನ್ ಅವರು ಧ್ವನಿಗೂಡಿಸಿರುವ ಜೈ ಹನುಮಾನ್ ಹಾಡು ಅದ್ಭುತವಾಗಿ ಮೂಡಿಬಂದಿದ್ದು, ಸುಮಾರು 17 ಲಕ್ಷ ಖರ್ಚು ಮಾಡಿದ್ದಾರೆ. ಕ್ಯಾಮರಾದಲ್ಲಿ ಸಂತೋಷ್ ರೈ ಪಾತಾಜೆ ಅವರ ಕೈಚಳಕವಿದ್ದು, ಈಡೀ ಚಿತ್ರ ನೋಡುಗರ ಮನಸೂರೆಗೊಳಿಸಲಿದೆ.
ಈಡೀ ಕುಟುಂಬ ಒಟ್ಟಾಗಿ ಕೂತು ವೀಕ್ಷಿಸಬಹುದಾದ ತುಳು ಚಿತ್ರ ಇದಾಗಿದ್ದು, ತುಳುಚಿತ್ರರಂಗದಲ್ಲಿ ಮಿಂಚಿನ ಸಂಚಲನ ಮೂಡಿಸುವುದರಲ್ಲಿ ಎರಡು ಮಾತಿಲ್ಲ.