ಸುಳ್ಯ, ಜು.22(DaijiworldNews/AA): ಕೆಎಸ್ಆರ್ಟಿಸಿ ಬಸ್ ಮತ್ತು ಸ್ಕೂಟಿ ನಡುವಿನ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ, ಗ್ರಾಮ ಪಂಚಾಯತ್ ಸದಸ್ಯ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಸೋಣಂಗೇರಿ ಸಮೀಪದ ಸುತ್ತುಕೋಟೆಯಲ್ಲಿ ನಡೆದಿದೆ.
ಅಪಘಾತದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಸದಸ್ಯ ರಾಮಚಂದ್ರ ಪ್ರಭು (68) ಅವರು ಮೃತಪಟ್ಟಿದ್ದಾರೆ.
ರಾಮಚಂದ್ರ ಪ್ರಭು ಅವರು ಸ್ಕೂಟಿಯಲ್ಲಿ ಸುಳ್ಯಕ್ಕೆ ಬರುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತವಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ರಾಮಚಂದ್ರ ಪ್ರಭುರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ನಿವಾಸಿಯಾಗಿರುವ ರಾಮಚಂದ್ರ ಪ್ರಭು ಅವರು ಅವರ ಪುತ್ರನ ವಿವಾಹ ಸಮಾರಂಭದ ಆಮಂತ್ರಣ ಪತ್ರ ವಿತರಣೆ ಕಾರ್ಯ ನಡೆಸಲು ಪತ್ನಿ ಉಮಾವತಿಯವರೊಂದಿಗೆ ಸುಳ್ಯದತ್ತ ಬರುತ್ತಿದ್ದರು. ದಂಪತಿ ಸುಳ್ಯದತ್ತ ಬರುತ್ತಿದ್ದಾಗ ದುಗಲಡ್ಕ ತಲುಪುವಷ್ಟರಲ್ಲಿ ಮಳೆ ಬಂದ ಕಾರಣ ಪತ್ನಿಯನ್ನು ಅಲ್ಲಿಯೇ ಇಳಿಸಿ ಬಸ್ನಲ್ಲಿ ಬರುವಂತೆ ತಿಳಿಸಿ ಸುಳ್ಯದತ್ತ ಬಂದರು. ಸುತ್ತುಕೋಟೆ ತಿರುವು ತಲುಪುವಷ್ಟರಲ್ಲಿ ಸುಳ್ಯದಿಂದ ಸುಬ್ರಹ್ಮಣ್ಯದತ್ತ ಹೋಗುತ್ತಿದ್ದ ಸರ್ಕಾರಿ ಬಸ್ಗೆ ಢಿಕ್ಕಿ ಹೊಡೆದಿದೆ. ತಲೆಗೆ ಗಂಭೀರವಾಗಿ ಗಾಯಗೊಂಡ ರಾಮಚಂದ್ರ ಪ್ರಭುಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮಹಜರು ನಡೆಸಲಾಯಿತು. ಸುಳ್ಯ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಮಚಂದ್ರ ಪ್ರಭುರವರು ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿತ್ಯನಿಧಿ ಸಂಗ್ರಾಹಕರಾಗಿ, ಗ್ರಾ.ಪಂ. ಸದಸ್ಯರಾಗಿ ಸಾಮಾಜಿಕ ಚಟುವಟಿಕೆಗಳಲ್ಲೂ ಗುರುತಿಸಿಕೊಂಡು ಊರಿನಲ್ಲಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.