ಕುಂದಾಪುರ, ಜು 22 (DaijiworldNews/ AK): ಘಾಟ್ ಪ್ರದೇಶದಲ್ಲಿ ಕುಸಿತದ ಕಾರಣಕ್ಕೆ ಜುಲೈ 26ರಿಂದ ಪ್ರತೀ ವಾರಾಂತ್ಯದಲ್ಲಿ ಬೆಂಗಳೂರು ಪಡೀಲ್ ಕಾರವಾರ ವಿಶೇಷ ರೈಲು ಸಂಚಾರಕ್ಕೆ ರೈಲ್ವೇ ಇಲಾಖೆ ಹಸಿರು ನಿಶಾನೆ ನೀಡಿದೆ.
ಈ ಹೊಸ ರೈಲು ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ ಬೆಂಗಳೂರಿನಿಂದ ಮಧ್ಯ ರಾತ್ರಿ 12:30ಕ್ಕೆ ಹೊರಟು ಬೆಳಿಗ್ಗೆ 11:30 ಉಡುಪಿ ತಲುಪಿ ಮಧ್ಯಾಹ್ನ 12 :15ಕ್ಕೆ ಕುಂದಾಪುರ ಮೂಲಕ ಸಂಜೆ 4:00ಕ್ಕೆ ಕಾರವಾರ ತಲುಪಲಿದೆ. ಅದೇ ದಿನ ರಾತ್ರಿ ಕಾರವಾರದಿಂದ ರಾತ್ರಿ 11:30ಕ್ಕೆ ಹೊರಟು ಕುಂದಾಪುರ ಉಡುಪಿ ಮಾರ್ಗವಾಗಿ ಪಡೀಲ್ ಬೈಪಾಸ್ ಮುಖಾಂತರ ಮಾರನೇ ದಿನ ಮಧ್ಯಾಹ್ನ 3 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ ಬೆಂಗಳೂರು ತಲುಪಲಿದೆ. ಪಡೀಲ್ ಬೈಪಾಸ್ ನೇರ ಮಾರ್ಗದ ಮೂಲಕ ಈ ರೈಲು ಬರುವುದರಿಂದ ಸುಮಾರು ಒಂದರಿಂದ ಎರಡು ಗಂಟೆ ಬೇಗನೆ ತಲುಪಬಹುದಾಗಿದೆ.
ಪ್ರಯಾಣಿಕರ ಸಮಸ್ಯೆ ಬಗ್ಗೆ ಕುಂದಾಪುರ ರೈಲು ಹಿತರಕ್ಷಣ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಳಿ ಪಡೀಲ್ ಬೈಪಾಸ್ ಮೂಲಕ ವಾರಾಂತ್ಯದ ಬೆಂಗಳೂರು ಕುಂದಾಪುರ ವಿಶೇಷ ರೈಲಿಗೆ ಮನವಿ ಮಾಡಿದ್ದು, ಸಂಸದ ಕೋಟ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಸಂಪರ್ಕಿಸಿ ವಾರಾಂತ್ಯದ ವಿಶೇಷ ರೈಲು ತರುವಲ್ಲಿ ಯಶಸ್ವಿಯಾಗಿದ್ದಾರೆ. ರೈಲು ಹಿತರಕ್ಷಣ ಸಮಿತಿಯ ಹೋರಾಟಕ್ಕೆ ಈಗ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.