ಮಂಗಳೂರು, ಜು.22(DaijiworldNews/AA): ಕಂಬಳಕ್ಕೆ ಸಿಗುತ್ತಿದ್ದ ಸರ್ಕಾರದ ಅನುದಾನ ಕೈತಪ್ಪಿದೆ. ಹೀಗಾಗಿ ಜಿಲ್ಲಾ ಕಂಬಳ ಸಮಿತಿ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧಾರ ಮಾಡಿದೆ.
ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರತಿಯೊಂದು ಕಂಬಳಕ್ಕೆ ತಲಾ 5 ಲಕ್ಷ ರೂ.ಗಳಂತೆ ಘೋಷಿಸಿದ್ದರು. ಅದರಂತೆ ಪ್ರತಿಯೊಂದು ಕಂಬಳಕ್ಕೂ ತಲಾ 5 ಲಕ್ಷ ರೂ.ಗಳಂತೆ ಅನುದಾನ ಸಿಗುತ್ತಿತ್ತು. ಆದರೆ 2023-24ನೇ ಸಾಲಿನಲ್ಲಿ ನಡೆದ ಕಂಬಳಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿರಲಿಲ್ಲ.
ಪುತ್ತೂರಿನ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ 5 ಲಕ್ಷ ರೂ. ಹಾಗೂ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕೆರೆ ಕಂಬಳಕ್ಕೆ 10 ಲಕ್ಷ ರೂ. ಪ್ರಾಯೋಜಕತ್ವವಾಗಿ ಸರ್ಕಾರ ಮಾರ್ಚ್ 13ರಂದು ಅನುದಾನ ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ನಿಯಮಾನುಸಾರ ಬಿಲ್ ತಯಾರಿಸಿ ದ.ಕ. ಜಿಲ್ಲಾಧಿಕಾರಿಯವರು ಮಾರ್ಚ್ 23ರಂದು ಜಿಲ್ಲಾ ಖಜಾನೆಗೆ ಸಲ್ಲಿಸಿದ್ದಾರೆ. ಆದರೆ ಜಿಲ್ಲಾ ಖಜಾನೆಯಲ್ಲಿ ಬಿಲ್ ಸ್ವೀಕೃತಿಯ ಕೊನೆಯ ದಿನಾಂಕ ಮಾರ್ಚ್ 20 ಆಗಿತ್ತು. ಹೀಗಾಗಿ ತಂತ್ರಾಂಶದಲ್ಲಿ ಬಿಲ್ ಸ್ವೀಕೃತಗೊಂಡಿರುವುದಿಲ್ಲ.
ಹೀಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಕಂಬಳಕ್ಕೆ ಬಿಡುಗಡೆ ಮಾಡಲಾಗಿದ್ದ ಈ ಅನುದಾನವನ್ನು ಪಾವತಿಸಲು ಸಾಧ್ಯವಾಗಿಲ್ಲ. ಮರು ಬಿಡುಗಡೆ ಮಾಡಲು ಪ್ರಸ್ತಾವನೆ ಪರಿಶೀಲನೆ ಹಂತದಲ್ಲಿದೆ ಎಂದು ಸರ್ಕಾರ ಹೇಳಿದೆ.