ಕುಂದಾಪುರ, ಜು.21(DaijiworldNews/AK): ದೇಶ ಅಭಿವೃದ್ಧಿ ಹೊಂದುತ್ತಿದೆ, ಆಧುನಿಕತೆ ಮುಂದುವರೆಯುತ್ತಿದೆ, ನಾವು ಸಾಕಷ್ಟು ತಂತ್ರಜ್ಞಾನಿಗಳಾಗುತ್ತಿದ್ದೇವೆ ಎನ್ನುವ ನಮಗೆ ನಮ್ಮೂರಿನ ಕುಗ್ರಾಮದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆಯಲ್ಲಿ ನಡೆದಾಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಇದೆ ಎಂದರೆ ಏನಾಗಬಹುದು?
ಹೌದು, ನಕ್ಸಲ್ ಪೀಡಿತ ಪ್ರದೇಶ ಎಂದು ಗುರುತಿಸಲ್ಪಟ್ಟ ಪ್ತದೇಶಗಳಲ್ಲಿ ಒಂದಾದ ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಜಾ - ಕಾರಿಮನೆ - ಎಡ್ಮಲೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇಲ್ಲಿ ವಾಹನಗಳಲ್ಲಿ ಸಂಚರಿಸುವುದು ಬಿಡಿ, ನಡೆದು ಸಾಗುವುದು ಅಸಾಧ್ಯವಾದ ಮಾತಾಗಿದೆ.
ಕರ್ನಾಟಕದ ಚಿರಾಪುಂಜಿ ಎಂದೇ ಪ್ರಸಿದ್ಧವಾದ ಆಗುಂಬೆಯ ತಪ್ಪಲಿನ ಗ್ರಾಮವಾದ ಮಡಾಮಕ್ಕಿ, ಕಾಡುಗಳಿಂದ ಕೂಡಿದ ಪ್ರದೇಶ. ಕಳೆದ ಹತ್ತು ದಿನಗಳಿಂದ ಸುಮಾರು 250 ರಿಂದ 315 ಮಿಲಿ ಮೀಟರ್ ಮಳೆ ಬಿದ್ದಿದ್ದು ವಿಪರೀತ ಮಳೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ರಸ್ತೆಯಾದ ಹಂಜಾ - ಕಾರಿಮನೆ - ಎಡ್ಮಲೆ ಸಂಪರ್ಕಿಸುವ ಸುಮಾರು 2.50 ಕಿ.ಮೀ. ಕಚ್ಚಾ ರಸ್ತೆಯು ಸಂಪೂರ್ಣ ಶಥಿಲಗೊಂಡಿದೆ. ಈ ಭಾಗದಲ್ಲಿ ಸುಮಾರು 150 ಕುಟುಂಬಗಳಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಶಾಲೆಗೆ ಹೋಗಲು, ಕೆಲಸಕ್ಕೆ ಹೋಗಲು ಪರದಾಡುವಂತಾಗಿದೆ.