ಬೈಂದೂರು, ಜು.21(DaijiworldNews/AA): ಶನಿವಾರ ವೈರಲ್ ಆದ ಕೊಲ್ಲೂರು ದೇವಸ್ಥಾನದ ಅರ್ಚಕ ಮಾತನಾಡಿದ್ದಾನೆನ್ನಲಾದ ಆಡಿಯೋ ರೆಕಾರ್ಡಿಂಗ್ ನಲ್ಲಿ ಸಂಪೂರ್ಣ ಸುಳ್ಳು ಆರೋಪಗಳಿವೆ ಎಂದು ಬೈಂದೂರು ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಹೇಳಿದ್ದಾರೆ. ಅಲ್ಲದೆ ಸುಳ್ಳು ಆರೋಪಗಳನ್ನು ಮಾಡಿರುವ ಅರ್ಚಕನ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಹೇಳಿದ್ದಾರೆ.
ಬೈಂದೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೊಲ್ಲೂರು, ಶಂಕರನಾರಾಯಣ, ಕುಂದಾಪುರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಉಡುಪಿಯ ಸೈಬರ್ ಕ್ರೈಂ ನಲ್ಲೂ ದೂರು ದಾಖಲಿಸಿದ ಬಳಿಕ ಉಪ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಾನ ನಷ್ಟ ಮೊಕದ್ದಮೆ ಹೂಡಲಾಗುತ್ತದೆ ಎಂದು ತಿಳಿಸಿದರು.
ಅಧಿಕಾರಿಗಳು ಬಿಜೆಪಿಯ ಕಾರ್ಯಕರ್ತರೇ? - ಶಾಸಕ ಗಂಟುಹೊಳಗೆ ಗೋಪಾಲ ಪೂಜಾರಿ ತರಾಟೆ
ಅಭಿವೃದ್ಧಿ ಕಾರ್ಯಗಳಿಗೆ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಅಡ್ಡಗಾಲು ಹಾಕುತ್ತಿದ್ದಾರೆ ಎನ್ನುವ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿಕೆಗೆ ಮಾಜಿ ಶಾಸಕ ಗೋಪಾಲ ಪೂಜಾರಿ ತಿರುಗೇಟು ನೀಡಿದ್ದಾರೆ.
ಶಾಸಕ ಗುರುರಾಜ್ ಗಂಟಿಹೊಳೆ ಶಾಸಕರ ಅಧಿಕೃತ ಕಚೇರಿಯಲ್ಲಿ ಕುಳಿತುಕೊಳ್ಳದೆ ಪಕ್ಷದ ಕಚೇರಿಯನ್ನೇ ಶಾಸಕರ ಕಚೇರಿಯನ್ನಾಗಿ ಮಾಡಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಹಾಗಿದ್ದರೆ ಸರ್ಕಾರೀ ಅಧಿಕಾರಿಗಳು ಬಿಜೆಪಿಯ ಕಾರ್ಯಕರ್ತರೇ? ಎಂದು ಪ್ರಶ್ನಿಸಿದ್ದಾರೆ. ಗೋಪಾಲ ಪೂಜಾರಿ ಅಭಿವೃದ್ಧಿಗೆ ತಡೆಯುಂಟುಮಾಡುತ್ತಿದ್ದಾರೆ ಎನ್ನುವುದು ತಮ್ಮ ಪ್ರಚಾರಕ್ಕಾಗಿ ಮಾಡಿಕೊಂಡಿರುವ ಆರೋಪ ಅಷ್ಟೇ ಎಂದು ಹೇಳಿರುವ ಗೋಪಾಲ ಪೂಜಾರಿ, ನಾನು ಇದುವರೆಗೆ ಲಕ್ಷ್ಮೀನಾರಾಯಣ ಹಾಗೂ ಸುಕುಮಾರ ಶೆಟ್ಟಿ ಶಾಸಕರಾಗಿದ್ದಾಗ ಯಾವುದೇ ತಡೆಯುಂಟು ಮಾಡಿಲ್ಲ. ಶಾಸಕರಾಗಿ ಅನುದಾನಗಳನ್ನು ತರಿಸಿಕೊಳ್ಳುವುದು ಅವರ ಕರ್ತವ್ಯ. ಅದನ್ನು ಅವರು ಮಾಡಬೇಕು. ಅದು ಬಿಟ್ಟು ಮಾಜಿ ಶಾಸಕ ಆಗಿರುವ ನಾನು ತಡೆಯುಂಟು ಮಾಡುತ್ತಿದ್ದೇನೆ ಎನ್ನುವ ಹೇಳಿಕೆ ಸರಿಯಲ್ಲ. ಇನ್ನಾದರೂ ಬೇರೆಯವರ ಮೇಲೆ ಗೂಬೆಕೂರಿಸುವುದನ್ನು ನಿಲ್ಲಿಸಿ ಅಭಿವೃದ್ಧಿ ಕಾರ್ಯದತ್ತ ಗಮನ ಕೊಡಲಿ. ಅವರ ಪ್ರಯತ್ನಕ್ಕೆ ನಾನೂ ಬೆಂಬಲಿಸುತ್ತೇನೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಅಕ್ರಮ ಸಕ್ರಮ ಸಭೆಗಳನ್ನು ಕರೆದಿದ್ದೀರಿ ಎಂದು ಪ್ರಶ್ನಿಸಿದ ಗೋಪಾಲ್ ಪೂಜಾರಿ, ನಮ್ಮ ಅವಧಿಯಲ್ಲಿ ಈಗಾಗಲೇ ಎರಡು ಸಿಟ್ಟಿಂಗ್ ನಡೆದಿದೆ. ಆದಷ್ಟು ಬೇಗ ಅರ್ಜಿಗಳನ್ನು ವಿಲೇವಾರಿ ಮಾಡುವುದು ನಮ್ಮ ಉದ್ದೇಶ. ಬೈಂದೂರು ಪದವಿ ಕಾಲೇಜಿನ ಅಧ್ಯಕ್ಷರಾದ ಬಳಿಕ ಶಾಸಕರು ಕಾಲೇಜಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಗೋಪಾಲ್ ಪೂಜಾರಿ, ಮೊದಲು ಕಾಲೇಜಿನ ಅಭಿವೃದ್ಧಿಯತ್ತ ಗಮನ ಕೊಡಲಿ ಮಕ್ಕಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿರುವುದನ್ನು ಮನಗಂಡು ಕಾಲೇಜಿನ ಉನ್ನತಿಗೆ ಶ್ರಮಿಸಲಿ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಗೆ ಮೀಸಲಿಟ್ಟ ಭೂಮಿ ಅಕ್ರಮ ವರ್ಗಾವಣೆ, ಕಳಪೆ ಕಾಮಗಾರಿಗಳ ತನಿಖೆಯಾಗಲಿ
ಒತ್ತಿನೆಣೆ ಭೂಕುಸಿತ ತಡೆಯುವಲ್ಲಿ ಶಾಶ್ವತ ಕಾಮಗಾರಿ ನಡೆಸುವಂತೆ ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ ಆಗ್ರಹಿಸಿದ್ದಾರೆ. ಪಡುವರಿ ಎಂಬಲ್ಲಿ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನಡೆದ ಕಾಮಗಾರಿ ಸಂಪೂರ್ಣ ಹಾಳಾಗಿದ್ದು, ಇಲ್ಲಿ ನಡೆದಿದರುವ ಕಳಪೆ ಕಾಮಗಾರಿಗಳ ಬಗ್ಗೆಯೂ ಸಮಗ್ರ ತನಿಖೆಯಾಗಬೇಕಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಗಳಿಂದಾಗಿಯೇ ಈ ವರ್ಷದ ಮಳೆಗೆ ಭೂ ಕುಸಿತವುಂಟಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ನಡೆದ ಕಳಪೆ ಕಾಮಗಾರಿಗಳ ತನಿಖೆಯಾಗಬೇಕು ಎಂದು ಗೋಪಾಲ ಪೂಜಾರಿ ಹೇಳಿದರು.
ಪ್ರವಾಸೋದ್ಯಮ ಇಲಾಖೆಗೆ ಕಾದಿರಿಸಲಾದ 1.06 ಸೆಂಟ್ಸ್ ಜಾಗವನ್ನು ಬೇನಾಮಿ ವ್ಯಕ್ತಿಯೊಬ್ಬರಿಗೆ ವರ್ಗಾಯಿಸಲಾಗಿದ್ದು, ಮೇಲ್ನೋಟಕ್ಕೆ ಪ್ರವಾಸೋದ್ಯಮ ಇಲಾಖೆ ಯಾವುದೋ ಸ್ಕ್ಯಾಮ್ ನಡೆಸಲು ಯತ್ನಿಸಿರುವ ಶಂಕೆ ಎದುರಾಗಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಉನ್ನತ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕೊಲ್ಲೂರಿನಲ್ಲಿ ಮನೆ ಮೇಲೆ ಗುಡ್ಡ ಕುಸಿತದಿಂದ ಸಾವನ್ನಪ್ಪಿರುವ ಮಹಿಳೆಗೆ ಪರಿಹಾರ ನೀಡಲಾಗುತ್ತದೆ. ಅದೇ ರೀತಿ, ಭೀಕರ ಗಾಳಿ ಮಳೆಗೆ ಹಾನಿಗೀಡಾದ ಅಡಿಕೆ ತೋಟ ಮತ್ತು ಭತ್ತದ ಕೃಷಿಕರಿಗೆ ಪರಿಹಾರ ನೀಡಬೇಕು. ಭತ್ತದ ಶಿ ಸಂಪೂರ್ಣ ಹಾಳಾಗಿದ್ದು, ಸರ್ಕಾರ ರೈತರಿಗೆ ಬಿತ್ತನೆ ಬೀಜ ಒದಗಿಸುವ ಕೆಲಸ ಮಾಡಬೇಕು. ಜಿಲ್ಲಾಧಿಕಾರಿಗಳ ಫ್ಲಡ್ ನಿಧಿಯಲ್ಲಿರುವ ಹಣವನ್ನು ಬಳಕೆ ಮಾಡುವುದರ ಜೊತೆಗೆ ಸರ್ಕಾರವೂ ಅತಿವೃಷ್ಟಿಯಿಂದ ತೊಂದರೆಗೊಳಗಾದ ರೈತರಿಗೆ, ಕೃಷಿಕರಿಗೆ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಮುಖಂಡರುಗಳಾದ ರಮೇಶ್ ಗಾಣಿಗ, ರಾಜು ಪೂಜಾರಿ, ಮದನ್ ಕುಮಾರ್, ಪ್ರಕಾಶ್ಚಂದ್ರ ಶೆಟ್ಟಿ, ವಿಜಯ್ ಶೆಟ್ಟಿ ಕಾಲ್ತೋಡು, ಸದಾಶಿವ ಪಡುವರಿ, ಬಾಬು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.