ಮಂಗಳೂರು,ಮೇ 17(Daijiworld News/MSP): ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಒಂದು ಕೋಟಿ ಮೊತ್ತದ ಹಣವನ್ನು ಮತ್ತು ಅದನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂದರು ಪೊಲೀಸರು ಮೇ 17 ರ ಶುಕ್ರವಾರ ಬೆಳಗ್ಗೆ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನನ್ನು ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ಮಂಜುನಾಥ್ (56) ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ಮಂಗಳೂರಿನ ರಥಬೀದಿಯಲ್ಲಿ ಬಂದರ್ ಪೊಲೀಸ್ ಠಾಣೆ ಸಿಬ್ಬಂದಿ ಗಸ್ತು ತಿರುಗುವ ಸಂದರ್ಭ ಅನುಮಾನಾಸ್ಪದವಾಗಿ ಬ್ಯಾಗ್ ಹೆಗಲ ಮೇಲೆ ಹಾಕಿ ತಿರುಗುತ್ತಿದ್ದ ವ್ಯಕ್ತಿಯನ್ನು ಕಂಡು ವಿಚಾರಿಸಿದಾಗ ಆತ ಯಾವುದೇ ಸರಿಯಾದ ಮಾಹಿತಿಯನ್ನು ನೀಡಲಿಲ್ಲ. ಹೀಗಾಗಿ ಆತನ ಬಳಿಯಿದ್ದ ಬ್ಯಾಗ್ ಪರಿಶೀಲನೆ ಮಾಡಿದಾಗ ಅದರಲ್ಲಿ ಒಂದು ಕೋಟಿ ರೂಪಾಯಿ ಮೊತ್ತವನ್ನು ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಹಣಕ್ಕೆ ದಾಖಲೆ ಒದಗಿಸುವಂತೆ ಕೇಳಿದಾಗ ಮಂಜುನಾಥ್ ಬಳಿ ಯಾವುದೇ ದಾಖಲೆಗಳಿರಲಿಲ್ಲ. ಮಾತ್ರವಲ್ಲದೆ ಆತನಿಗೆ ತಾನು ಸಾಗಿಸುತ್ತಿದ್ದ ಬ್ಯಾಗ್ ನಲ್ಲಿ ಹಣವಿರುವು ತಿಳಿದಿಲ್ಲ ಎಂದು ತನಿಖೆ ವೇಳೆ ಮಂಜುನಾಥ್ ಹೇಳಿಕೊಂಡಿದ್ದಾರೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಬ್ಯಾಗ್ ನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರು ಎಂದು ವಿಚಾರಣೆಯ ವೇಳೆ ಬಾಯಿಬ್ಬಿಟ್ಟಿದ್ದಾನೆ.
ನಗದು ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ.