ಮಂಗಳೂರು, ಜು.21(DaijiworldNews/AA): ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಮಂಗಳೂರು ಭೇಟಿಯು ವಿಮಾನ ಮಿಸ್ ಆಗಿದ್ದರಿಂದ ರದ್ದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದಿನೇಶ್ ಗುಂಡೂರಾವ್ ಅವರು ಇಂದು ದ.ಕ. ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು. ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ತೆರಳಬೇಕಿತ್ತು. ಆದರೆ ಬೆಂಗಳೂರು ವಿಮಾನ ನಿಲ್ದಾಣ ರಸ್ತೆ ಬ್ಲಾಕ್ ಆದ ಹಿನ್ನೆಲೆ ದಿನೇಶ್ ಗುಂಡೂರಾವ್ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದಾರೆ. ಅತ್ತ ಅವರು ಪ್ರಯಾಣಿಸಬೇಕಿದ್ದ ವಿಮಾನ ಕೂಡ ಟೇಕಾಫ್ ಆಗಿದೆ. ಪರಿಣಾಮ ವಿಮಾನ ಮಿಸ್ ಆಗಿದ್ದರಿಂದ ದಿನೇಶ್ ಗುಂಡೂರಾವ್ ಅವರ ದ.ಕ. ಜಿಲ್ಲಾ ಪ್ರವಾಸ ರದ್ದಾಗಿದೆ.
ದಿನೇಶ್ ಗುಂಡೂರಾವ್ ಅವರು ಇಂದು ಜಿಲ್ಲೆಯ ಅದ್ಯಪಾಡಿ, ಕೆತ್ತಿಕಲ್, ಪಾಣೆಮಂಗಳೂರು ಪ್ರದೇಶಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲನೆ ನಡೆಸಬೇಕಿತ್ತು. ಮಳೆ ಹಾನಿ, ಪರಿಹಾರ ಕಾರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಿಗದಿಯಾಗಿತ್ತು. ಇದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಆದರೆ ಇದೀಗ ಸಚಿವರ ಜಿಲ್ಲಾ ಭೇಟಿ ದಿಢೀರ್ ರದ್ದಾಗಿದೆ.