ಮಂಗಳೂರು, ಜು. 20(DaijiworldNews/AA): ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಭಾಗಶಃ ಕುಸಿದು ಬಿದ್ದಿದ್ದು, ಮನೆಮಂದಿಯೆಲ್ಲಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಹರೇಕಳ ರಾಜಗುಡ್ಡೆ ಶಾಲೆಯ ಮಣಿಬೆಟ್ಟು ಎಂಬಲ್ಲಿ ನಡೆದಿದೆ.
ವಸಂತ್ ಪೂಜಾರಿ ಎಂಬವರ ಮನೆ ಭಾಗಶಃ ಕುಸಿದುಬಿದ್ದಿದೆ. ಮನೆಮಂದಿ ರಾತ್ರಿ ವೇಳೆ ಮನೆಯೊಳಗಿದ್ದ ಸಂದರ್ಭ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಭಾಗಶಃ ಕುಸಿದುಬಿದ್ದಿದ್ದು, ಹಂಚುಗಳು ಉದುರಲು ಆರಂಭವಾಗುವಾಗ ಅಪಾಯದ ಮುನ್ಸೂಚನೆ ಅರಿತ ದಂಪತಿ ಸೇರಿದಂತೆ ಮೂವರು ಹೆಣ್ಮಕ್ಕಳು ಮನೆಯಿಂದ ಹೊರಹೋಗಿ ಸಂಭಾವ್ಯ ಅನಾಹುತದಿಂದ ಪಾರಾಗಿದ್ದಾರೆ.
ವಸಂತ್ ಪೂಜಾರಿ ಅವರಿಗೆ ಪತ್ನಿ ಸೇರಿದಂತೆ ಶಾಲೆ ಹಾಗೂ ಕಾಲೇಜಿಗೆ ಹೋಗುವ ಮೂರು ಹೆಣ್ಣು ಮಕ್ಕಳಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಇಡೀ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಇದೀಗ ಆರ್ಥಿಕವಾಗಿ ಹಿಂದುಳಿದ ಮನೆಮಂದಿಗೆ ಆಸೆರೆಯೂ ಇಲ್ಲದೆ ದಿಕ್ಕು ತೋಚದಂತಾಗಿದ್ದಾರೆ.
ಸದ್ಯಕ್ಕೆ ಸಂಬಂಧಿಕರ ನೆರೆಮನೆಯಲ್ಲಿ ಇಡೀ ಕುಟುಂಬ ವಾಸವಾಗಿದೆ. ಘಟನಾ ಸ್ಥಳಕ್ಕೆ ಗ್ರಾ.ಪಂ ಸದಸ್ಯ ಭೇಟಿ ನೀಡಿದ್ದಾರೆ. ಆದರೆ ಮನೆಯ ಪುನರ್ ನಿರ್ಮಾಣಕ್ಕೆ ಬೇಕಾಗುವಷ್ಟು ಪರಿಹಾರ ಸಿಗುವುದು ಕಷ್ಟ. ಸಂಘ, ಸಂಸ್ಥೆಗಳು ಇಡೀ ಕುಟುಂಬಕ್ಕೆ ಸೂರು ಕಲ್ಪಿಸಲು ನೆರವಾಗಬೇಕಾಗಿದೆ ಅನ್ನುವ ಆಶಯ ಸ್ಥಳೀಯರದ್ದಾಗಿದೆ.