ಉಡುಪಿ, ಜು. 20(DaijiworldNews/AA): ಹುಚ್ಚು ನಾಯಿಯೊಂದು ಎಂಟು ಮಂದಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಉಡುಪಿ ನಗರದಲ್ಲಿ ಇಂದು ಮಧ್ಯಾಹ್ನ ವೇಳೆ ಸಂಭವಿಸಿದೆ.
ತೀರಾ ಬಸವಳಿದ ಸ್ಥಿತಿಯಲ್ಲಿದ್ದ ಈ ನಾಯಿಯು ರಸ್ತೆಯಲ್ಲಿ ಹೋಗುವಾಗ ಎದುರಿಗೆ ಸಿಕ್ಕಿದವರೆಲ್ಲರಿಗೂ ಕಚ್ಚಿಕೊಂಡು ಹೋಗಿದೆ. ಕೆಲವರ ಕಾಲಿನ ಮಾಂಸ ಕೂಡ ಕಚ್ಚಿ ತಿಂದಿದೆ. ಗಾಯಗೊಂಡ ಎಲ್ಲರು ಉಡುಪಿ ಜಿಲ್ಲಾಸ್ಪತ್ರೆಗೆ ತೆರಳಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಸ್ಥಳೀಯವಲ್ಲದ ಎಲ್ಲಿಂದಲೋ ಬಂದ ಈ ನಾಯಿಗೆ ಹುಚ್ಚು ಹಿಡಿದಿರುವುದನ್ನು ಸ್ಥಳೀಯರು ಗಮನಿಸಿದರು. ಬಳಿಕ ನಾಯಿಯು ತೀರಾ ಸುಸ್ತಾಗಿ ಉಡುಪಿಯ ನಾರ್ತ್ ಶಾಲೆಯ ಆವರಣದಲ್ಲಿ ಬಂದು ಬಿದ್ದಿರುವುದನ್ನು ಸಾರ್ವಜನಿಕರು ಗುರುತಿಸಿ, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಿಗೆ ತಿಳಿಸಿದರು.
ನಿತ್ಯಾನಂದ ಒಳಕಾಡು ತಕ್ಷಣ ನಗರಸಭೆ ಪೌರಾಯುಕ್ತ ರಾಯಪ್ಪ ಹಾಗೂ ಪ್ರಾಣಿದಯಾ ಸಂಘದವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರು ಹಾಗೂ ಪ್ರಾಣಿದಯಾ ಸಂಘದ ಮಂಜುಳಾ ಹಾಗೂ ಪೃಥ್ವಿ ಪರಿಶೀಲನೆ ನಡೆಸಿದರು. ನಂತರ ಪಶು ವೈದ್ಯರನ್ನು ಕರೆಸಿ ನಾಯಿಗೆ ಚಚ್ಚುಮದ್ದು ನೀಡಲಾಯಿತು ಎಂದು ತಿಳಿದುಬಂದಿದೆ.