ಬಂಟ್ವಾಳ, ಜು. 20(DaijiworldNews/AA): ಪುತ್ತೂರು-ಸುಳ್ಯ ವಿಧಾನಸಭಾ ಕ್ಷೇತ್ರಗಳಿಗೆ ಕುಡಿಯುವ ನೀರಿನ ಉದ್ದೇಶದ ಬಹುಗ್ರಾಮ ಯೋಜನೆಗೆ ಬಂಟ್ವಾಳದ ಬಾಳ್ತಿಲ-ಶಂಭೂರು ಗ್ರಾಮದ ಗಡಿ ಪ್ರದೇಶದ ಕಂದಾಯಮಜಲುವಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಾಕ್ವೆಲ್ಗಾಗಿ ಬಂಡೆ ಸ್ಫೋಟಿಸಿ ಸ್ಥಳೀಯ ಮನೆಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಮನೆ ಹಾನಿಯನ್ನು ಪರಿಶೀಲಿಸಿದರು. ಹಾನಿಯಾಗಿರುವ ಎಲ್ಲಾ ಮನೆಗಳನ್ನು ಕಂದಾಯ ಇಲಾಖೆಯವರು ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗದ ಮೂಲಕ ಸ್ಥಳೀಯ ಪ್ರಮುಖರೊಂದಿಗೆ ಸರ್ವೇ ನಡೆಸಿ ವರದಿ ಸಿದ್ಧಪಡಿಸಬೇಕು. ಆ ವರದಿ ಆಧಾರದಲ್ಲಿ ಮುಂದೆ ಮನೆಗಳ ದುರಸ್ತಿಗೆ ಸಂಬಂಧಿಸಿ ಕಾಮಗಾರಿ ನಡೆಸುವವರೇ ಕ್ರಮಕೈಗೊಳ್ಳಬೇಕಿದೆ. ಇದರ ಕುರಿತು ಸ್ಥಳೀಯ 5 ಮಂದಿಗೆ ಜವಾಬ್ದಾರಿ ನೀಡಲಾಯಿತು.
ಇದರೊಂದಿಗೆ ಕಾಮಗಾರಿ ನಡೆಸುವ ಗುತ್ತಿಗೆ ಸಂಸ್ಥೆಯ ಘನ ವಾಹನಗಳು ತೆರಳಿ ರಸ್ತೆ ಹದಗೆಟ್ಟಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಗೂ ಕ್ರಮಕೈಗೊಳ್ಳುವಂತೆ ಎಇಇ ಜಿ.ಕೆ.ನಾಯ್ಕ್ ಅವರಿಗೆ ಶಾಸಕರು ಸೂಚಿಸಿದರು. ಮುಂದೆ ಸ್ಫೋಟ ನಡೆಸುವ ವೇಳೆ ಮನೆಗಳ ಪಕ್ಕದಲ್ಲಿ ಒಬ್ಬ ವ್ಯಕ್ತಿಯನ್ನು ನಿಲ್ಲಿಸುವಂತೆ ಯೋಜನೆಯ ಪ್ರಾಜೆಕ್ಟ್ ಮ್ಯಾನೇಜರ್ ಶ್ರೀನಿವಾಸ್ ಅವರಿಗೆ ಸೂಚಿಸಿದರು.
ಈ ಸಂದರ್ಭ ಕಂದಾಯ ನಿರೀಕ್ಷಕ ವಿಜಯ್ ಆರ್, ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.