ಬಂಟ್ವಾಳ, ಜು. 20(DaijiworldNews/AA): ಶಾಮಿಯಾನದ ಲಾರಿ ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದ ಮರುದಿನವೇ ಶಾಮಿಯಾನದ ಕೆಲಸಗಾರನೋರ್ವ ವಿದ್ಯುತ್ ಶಾಕ್ ಗೆ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಸಮೀಪ ಕೆಮ್ಮನ್ ಕಾಡಬೆಟ್ಟು ಎಂಬಲ್ಲಿ ನಡೆದಿದೆ.
ಮೃತ ಯುವಕನನ್ನು ಬಿಹಾರ ಮೂಲದ ಕುಂದನ್ ಕುಮಾರ್ (20) ಎಂದು ಗುರುತಿಸಲಾಗಿದೆ. ಗಾಯಗೊಂಡ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಲಾರಿಯೊಂದರಿಂದ ಶಾಮಿಯಾನದ ಸಾಮಾಗ್ರಿಗಳನ್ನು ಇಳಿಸುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ವರು ಕೆಲಸಗಾರರಿಗೆ ಗಾಯವಾಗಿದೆ. ಅದರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿ ತಲುಪಿದ್ದ. ಬಳಿಕ ಆತನನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾನೆ.
ನಾಲ್ಕು ಮಂದಿ ಗಾಯಾಳುಗಳ ಪೈಕಿ ಇಬ್ಬರು ಜಾರ್ಖಂಡ್, ಒಬ್ಬರು ಪಶ್ಚಿಮ ಬಂಗಾಳ ಹಾಗೂ ಇನ್ನೊಬ್ಬರು ಕಡೇಶಿವಾಲಯ ಗ್ರಾಮದ ಸ್ಥಳಿಯ ನಿವಾಸಿಯಾಗಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.