ಕುಂದಾಪುರ, ಜು 20(DaijiworldNews/MS): ವಾರಾಹಿ ಯೋಜನೆಯ ಮಾನಿ ಹಾಗೂ ವರಾಹಿ ಪಿಕ್ ಅಪ್ ಆಣೆಕಟ್ಟುಗಳ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ವಾರಾಹಿ ಪಿಕ್ ಅಪ್ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿದ್ದು, ಇದೇ ರೀತಿ ಮುಂದುವರಿದರೆ ಯಾವುದೇ ಸಂದರ್ಭದಲ್ಲಿ ವಾರಾಹಿ ಪಿಕ್ ಅಪ್ ಅಣೆಕಟ್ಟಿನ ರೇಡಿಯಲ್ ಗೇಟ್ಸ್ ಮುಖಾಂತರ ನೀರು ಹೊರಬಿಡಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರು ಎಚ್ಚರಿಕೆ ನೀಡಿದ್ದಾರೆ.
ವಾರಾಹಿ ಪಿಕ್ ಅಪ್ ಅಣೆಕಟ್ಟಿನಲ್ಲಿ ಶೇಖರಣೆಯಾದ ನೀರನ್ನು ಬಳಸಿ ಭೂಗರ್ಭ ವಿದ್ಯುದಾಗಾರದಲ್ಲಿ ಕನಿಷ್ಠ 1000 ದಿಂದ ಗರಿಷ್ಠ 5000 ಕ್ಯೂಸೆಕ್ಸ್ ನಷ್ಟು ನೀರನ್ನು ವಿದ್ಯುತ್ ಉತ್ಪಾದಿಸಿ ನಂತರ ಹೊರಬಿಡಲಾಗುತ್ತಿದೆ. ಜಲಾಶಯಕ್ಕೆ ನೀರಿನ ಒಳ ಹರಿವು ಮುಂದುವರೆದಲ್ಲಿ ಹಾಗೂ SLDC (State Load Dispatch Center) ವತಿಯಿಂದ ವಿದ್ಯುತ್ ಉತ್ಪಾದನೆಗೆ ಬೇಡಿಕೆ ಬಾರದಿದ್ದರೆ ನೀರನ ಮಟ್ಟ ಹೆಚ್ಚಾಗಲಿದೆ ಎಂದಿರುವ ಅವರು, ವರಾಹಿ ಪಿಕ್ ಅಪ್ ಆಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ವಿದ್ಯುತ್ ಉತ್ಪಾದನೆಯಿಂದ ಹೊರಬಿಡುವ ನೀರಿನ ಪ್ರಮಾಣದಷ್ಟೇ ಅಂದರೆ ಗರಿಷ್ಠ 5000 ಕ್ಯೂಸೆಕ್ಸ್ ನಷ್ಟು ನೀರನ್ನು ರೇಡಿಯಲ್ ಗೇಟುಗಳ ಮೂಲಕ ಹೊರಬಿಡಲಾಗುವುದು ಎಂದಿದ್ದಾರೆ. ಇದರಿಂದ ಜಲಾಶಯದ ಕೆಳಗಿನ ಪ್ರದೇಶದಲ್ಲಿ ವಾಸವಿರುವ ಕುಟುಂಬಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.