ಕುಂದಾಪುರ, ಜು. 18(DaijiworldNews/AK) :ಭೂಕುಸಿತದಿಂದ ರಸ್ತೆ ಮುಚ್ಚಿರುವ ಕಾರಣ ಬೆಂಗಳೂರು ಮತ್ತು ಉಡುಪಿ ಜಿಲ್ಲೆಯನ್ನು ಮರು-ಸಂಪರ್ಕಿಸಲು ಪಡೀಲ್ ಬೈಪಾಸ್ ಮೂಲಕ ಕುಂದಾಪುರ ಮತ್ತು ಬೆಂಗಳೂರು ನಡುವೆ ವಿಶೇಷ ರಾತ್ರಿ ರೈಲು ಪ್ರಯಾಣ ಆರಂಭಿಸಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸೌತ್ ವೆಸ್ಟರ್ನ್ ರೈಲ್ವೇಸ್ ನ ಜನರಲ್ ಮ್ಯಾನೇಜರ್ ಗೆ ಪತ್ರ ಬರೆದಿದ್ದಾರೆ.
ಕುಂದಾಪುರ-ಬೆಂಗಳೂರು ನಡುವೆ ಭೂಕುಸಿತ ಹಾಗೂ ಹಲವು ರಸ್ತೆಗಳು ಬಂದ್ ಆಗಿರುವುದರಿಂದ ರಸ್ತೆ ಸಾರಿಗೆಯನ್ನೇ ನಂಬಿಕೊಂಡಿರುವ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಈ ಎರಡು ಪ್ರಮುಖ ಸ್ಥಳಗಳ ನಡುವೆ ಪ್ರಯಾಣಕ್ಕೆ ಅನುಕೂಲವಾಗುವಂತೆ ಉಡುಪಿ ಮತ್ತು ಕುಂದಾಪುರವನ್ನು ಬೆಂಗಳೂರಿಗೆ ಪಡೀಲ್ ಬೈಪಾಸ್ ಮೂಲಕ ಸಂಪರ್ಕಿಸಲು ವಿಶೇಷ ರಾತ್ರಿ ರೈಲು ಸೇವೆಯನ್ನು ಆರಂಭಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿನಿಂದ ಕಾರವಾರಕ್ಕೆ ರಾತ್ರಿ ವಿಶೇಷ ರೈಲು ಆರಂಭಿಸಬೇಕು ಎಂಬುದಾಗಿ ಈ ಹಿಂದೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತ ರಕ್ಷಣಾ ಸಮಿತಿ ಮನವಿ ಮಾಡಿತ್ತು.