ಮಂಗಳೂರು, ಜು 19 (DaijiworldNews/MS): ಇನ್ಮೇನು ಕೆಲವೇ ದಿನಗಳಲ್ಲಿ ಹಬ್ಬ ಹರಿದಿನಗಳು ಆರಂಭಗೊಳ್ಳಲಿದ್ದು ಇಂತಹ ಸಂದರ್ಭದಲ್ಲಿ ಹಿಂದೂ ಸಮಾಜವನ್ನು ಕೆಣಕುವ ದುರುದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದಿನಿಂದ ನಡೆದುಕೊಂಡ ಬಂದ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ಶಿಕ್ಷಣ ಇಲಾಖೆಯ ಮೂಲಕ ಯತ್ನಿಸಿರುವುದು ಅಕ್ಷಮ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಶಾಲಾ ಮೈದಾನಗಳಲ್ಲಿ ಇನ್ನು ಮೇಲೆ ಇಷ್ಟು ವರ್ಷಗಳಿಂದ ಆಚರಿಸಿಕೊಂಡು ಬಂದಂತಹ ಸಂಪ್ರದಾಯಗಳಾದ ಗಣೇಶೋತ್ಸವ, ಅಷ್ಟಮಿ, ಸರಸ್ವತಿ ಪೂಜೆ ಮುಂತಾದ ಹಬ್ಬಗಳಿಗೆ ಅವಕಾಶ ನಿರಾಕರಣೆ ಮಾಡಲಾಗಿದೆ. ಭಾರತದಲ್ಲಿ ಎಷ್ಟೋ ಶಿಕ್ಷಣ ಸಂಸ್ಥೆಗಳಿಗೆ ಹಿಂದೂ ಸಮಾಜ ದೇವಸ್ಥಾನಗಳ ಜಾಗವನ್ನು ಮಾತ್ರವಲ್ಲದೇ ತಮ್ಮ ವೈಯಕ್ತಿಕ ಜಾಗವನ್ನೂ ಸಹ ದಾನ ಮಾಡಿರುವ ಉದಾಹರಣೆ ಇದೆ.
ಅಂತಹ ಉದಾತ್ತ ಚಿಂತನೆಯ ಧರ್ಮದ ಸಂಸ್ಕೃತಿ ಬಗ್ಗೆ ಜಿಹಾದಿ ಮಾನಸಿಕತೆಯ ಕಾಂಗ್ರೆಸ್ಸಿಗೆ ಅರ್ಥವಾಗುವುದಾದರೂ ಹೇಗೆ? ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕತೆಗೆ ಅವಕಾಶ ಬೇಡ ಎನ್ನುವ ಇದೇ ಕಾಂಗ್ರೆಸ್ ಹಿಜಾಬ್ ಗೆ ಬೆಂಬಲ ಕೊಡುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತದೆ ಎಂದರು.
ಕೂಡಲೇ ದುರುದ್ದೇಶಪೂರಿತವಾದ ಶಿಕ್ಷಣ ಇಲಾಖೆಯ ಈ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಹಿಂದೂ ಸಮಾಜದ ಆಕ್ರೋಶದ ಕಟ್ಟೆಯೊಡೆದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಶಾಸಕರು ಎಚ್ಚರಿಸಿದರು.