ಮಂಗಳೂರು, ಜು. 19(DaijiworldNews/AA): ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ನಲ್ಲಿ ಸಂಭವಿಸಿದ ಗುಡ್ಡ ಕುಸಿತದಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು-ಮಾಣಿ ಹೆದ್ದಾರಿಯ ಮಡಿಕೇರಿ ಘಾಟ್ ನ್ನು ಕೊಡಗು ಮತ್ತು ದ.ಕ. ಜಿಲ್ಲಾಡಳಿತವು ಯಾವುದೇ ಮುನ್ಸೂಚನೆ ನೀಡದೇ ನಿನ್ನೆ ರಾತ್ರಿ 8 ಗಂಟೆಗೆ ಬಂದ್ ಮಾಡಿತ್ತು.
ಜಿಲ್ಲಾಡಳಿತಗಳ ಆದೇಶದಂತೆ ಮಡಿಕೇರಿ ಜನರಲ್ ಕಾರ್ಯಪ್ಪ ಸರ್ಕಲ್ ಸಮೀಪ ಮತ್ತು ಘಾಟಿ ಮಧ್ಯೆ ಮದೆನಾಡಿನಲ್ಲಿ ಹಾಗೂ ಸಂಪಾಜೆ ಚೆಕ್ ಪೋಸ್ಟ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದರು. ಘಾಟಿಯನ್ನು ಬಂದ್ ಮಾಡುವ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲದಿರುವುದರಿಂದ ನೂರಾರು ವಾಹನ ಸವಾರರ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಾಗಿತ್ತು. ಹಲವಾರು ವಾಹನಗಳಲ್ಲಿದ್ದ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ನೂರಾರು ಮಂದಿ ಘಾಟ್ ಮಧ್ಯೆ ಮದೆನಾಡು ಮತ್ತು ಸಂಪಾಜೆಯ ಕುಗ್ರಾಮದಲ್ಲಿ ಬಾಕಿಯಾಗಿದ್ದರು. ಈ ವೇಳೆ ಮಳೆಯೂ ಎಡಬಿಡದೆ ಸುರಿಯುತ್ತಿತ್ತು.
ಘಾಟ್ ರಸ್ತೆಯಲ್ಲಿ ಯಾವುದೇ ಅನಾಹುತವಾಗದೇ ಇದ್ದರೂ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಹಠಾತ್ ರಸ್ತೆ ನಿರ್ಬಂಧ ಮಾಡಲಾಗಿತ್ತು. ಈ ರಸ್ತೆ ಮಾರ್ಗವಾಗಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ರಶೀದ್ ವಿಟ್ಲ ಹಾಗೂ ಅವರ ಸ್ನೇಹಿತ ಅಬೂಬಕರ್ ಪುತ್ತು ಪ್ರಯಾಣಿಸುತ್ತಿದ್ದರು. ಬಳಿಕ ರಶೀದ್ ವಿಟ್ಲ ಅವರು ಈ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ಅವರ ಗಮನಕ್ಕೆ ತಂದರು.
ಮಧ್ಯರಾತ್ರಿ 12.30ಕ್ಕೆ ರಶೀದ್ ವಿಟ್ಲ ಅವರು ಯು.ಟಿ.ಖಾದರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಯು.ಟಿ.ಖಾದರ್ ತಕ್ಷಣ ಮಂಗಳೂರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಕೊಡಗು ಎಸ್ಪಿ ರಾಮರಾಜನ್ ಅವರಿಗೆ ಸೂಚಿಸಿ ಅವರಿಗೆ ವಸ್ತುಸ್ಥಿತಿಯ ವಿವರಣೆ ನೀಡುವಂತೆ ರಶೀದ್ ಗೆ ತಿಳಿಸಿದರು. ಘಟನಾ ಸ್ಥಳದಲ್ಲಿದ್ದ ರಶೀದ್ ವಿಟ್ಲ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಹಠಾತ್ ರಸ್ತೆ ಬಂದ್ ನಿಂದ ವಾಹನ ಪ್ರಯಾಣಿಕರಿಗೆ ಆಗಿರುವ ತೊಂದರೆಗಳ ಬಗ್ಗೆ ಹಾಗೂ ದುಷ್ಪರಿಣಾಮಗಳ ಕುರಿತು ವಿವರಿಸಿದರು.
ಹಲವಾರು ಮಹಿಳೆಯರು ಶೌಚಾಲಯಕ್ಕೆ ತೆರಳದೇ ಮಳೆಯಲ್ಲಿ ಕಾಡಿನ ಮಧ್ಯೆ ಸಿಲುಕಿಕೊಂಡಿದ್ದು, ವಯಸ್ಕರು, ಮಕ್ಕಳು ಸೇರಿದಂತೆ ಇವರನ್ನೆಲ್ಲಾ ಬೆಳಗ್ಗಿನವರೆಗೆ ರಸ್ತೆಯಲ್ಲೇ ನಿಲ್ಲಿಸಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಬೆಂಗಳೂರಿಗೆ ತೆರಳುತ್ತಿರುವ ಕೆಲವು ಎಮರ್ಜೆನ್ಸಿ ರೋಗಿಗಳ ಆಕ್ರಂದನದ ಹಾಗೂ ನಿತ್ಯ ಬಳಕೆಯ ವಸ್ತುಗಳ ಗೂಡ್ಸ್ ಲಾರಿಗಳು ಬಾಕಿಯಾಗಿರುವ ಬಗ್ಗೆ ರಶೀದ್ ವಿಟ್ಲ ಅವರು ದ.ಕ. ಜಿಲ್ಲಾಧಿಕಾರಿಗೆ ಹಾಗೂ ಕೊಡಗು ಎಸ್ಪಿ ಅವರಿಗೆ ಮಾಹಿತಿ ನೀಡಿದರು.
ಕೂಡಲೇ ಕಾರ್ಯಪ್ರವೃತ್ತರಾದ ದ.ಕ. ಜಿಲ್ಲಾಧಿಕಾರಿ ಮತ್ತು ಕೊಡಗು ಎಸ್ಪಿ ಅವರು, ಅತಂತ್ರ ಸ್ಥಿತಿಯಲ್ಲಿದ್ದ ಎಲ್ಲಾ ವಾಹನಗಳನ್ನು ರಾತ್ರಿ 1.30ಕ್ಕೆ ಪೊಲೀಸ್ ಇಲಾಖೆಯ ಹೈವೇ ಪ್ಯಾಟ್ರೋಲ್ ಗಳ ಮೂಲಕ ಪೊಲೀಸ್ ಎಸ್ಕಾರ್ಟ್ ಕಣ್ಗಾವಲಲ್ಲಿ ಸುರಕ್ಷಿತವಾಗಿ ಮದೆನಾಡು ಪ್ರದೇಶದಿಂದ ಸಂಪಾಜೆಗೆ ತಲುಪಿಸುವ ವ್ಯವಸ್ಥೆ ಮಾಡಿದರು. ಸಂಪಾಜೆಯಿಂದ ಮಡಿಕೇರಿ ಕಡೆ ಹೋಗಬೇಕಾಗಿದ್ದ ವಾಹನಗಳನ್ನು ಅದೇ ಪೊಲೀಸ್ ಎಸ್ಕಾರ್ಟ್ ನಲ್ಲಿ ಮಡಿಕೇರಿಗೆ ಸುರಕ್ಷಿತವಾಗಿ ತಲುಪಿಸಿದರು. ಇದರಿಂದಾಗಿ ನೂರಾರು ವಾಹನಗಳಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಯಿತು.
ಸುಮಾರು ಐದು ಗಂಟೆಗಳಿಂದ ಮಧ್ಯರಾತ್ರಿ ಕಾಡಿನ ಮಧ್ಯೆ ಕಾದು ನಿರಾಶರಾಗಿದ್ದ ಜನರಿಗೆ ಕೊನೆಗೂ ಪರಿಹಾರ ಸಿಕ್ಕಿದಂತಾಗಿದೆ. ಜನ ಸಾಮಾನ್ಯರ ಕೂಗಿಗೆ ತಳಮಟ್ಟದ ಅಧಿಕಾರಿಗಳೂ ಕರೆ ಸ್ವೀಕರಿಸದ ಈ ಕಾಲದಲ್ಲಿ ಸ್ಪೀಕರ್ ಯು.ಟಿ.ಖಾದರ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಕೊಡಗು ಎಸ್ಪಿ ರಾಮರಾಜನ್ ಹಾಗೂ ಕೊಡಗು ಪೊಲೀಸರು ಕರೆ ಸ್ವೀಕರಿಸಿ ಕೂಡಲೇ ಕಾರ್ಯಪ್ರವೃತ್ತರಾಗಿ ಪರಿಹಾರ ಒದಗಿಸಿ ಇತರರಿಗೆ ಮಾದರಿಯಾಗಿದ್ದಾರೆ.