ಮಂಗಳೂರು, ಜು 19 (DaijiworldNews/MS): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಪಾರಂಭವಾದ ಒಂದೆರಡು ತಿಂಗಳಿನಿಂದೀಚೆಗೆ ಮೂವರು ವ್ಯಕ್ತಿಗಳು ವ್ಯಕ್ತಿಗಳು ವಿದ್ಯುತ್ ಶಾಕ್ ಹೊಡೆದು ಪ್ರಾಣ ಕಳೆದುಕೊಂಡ ಘಟನೆ ಬೆನ್ನಲ್ಲೇ ಶುಕ್ರವಾರ ಜಿಲ್ಲೆಯಲ್ಲಿ ಮತ್ತೊಂದು ವಿದ್ಯುತ್ ಅವಘಡ ಸಂಭವಿಸಿ ವಿದ್ಯಾರ್ಥಿನಿಯೊಬ್ಬರು ಪ್ರಾಣ ಕಳೆದುಕೊಂಡಿರುವುದು ವಿಪರ್ಯಾಸ.
ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಿ. ಎ ವಿದ್ಯಾರ್ಥಿನಿ ಆಶ್ನಿ (21) ಮೃತಪಟ್ಟಿದ್ದು ಗದ್ದೆಯಲ್ಲಿ ದನ ಕಟ್ಟಿ ಹಾಕಲು ಮನೆಯಿಂದ ತೆರಳಿದ್ದ ವೇಳೆ ಈ ಅವಘಡ ನಡೆದಿದೆ.
ತಂದೆಯೊಂದಿಗೆ ಗದ್ದೆಗೆ ಹೋಗಿದ್ದ ಆಶ್ನಿ ಜೊತೆಗೆ ಮನೆಯ ಸಾಕು ನಾಯಿ ಕೂಡಾ ತೆರಳಿದ್ದು, ನಾಯಿಗೆ ಮೊದಲು ವಿದ್ಯುತ್ ಶಾಕ್ ತಗುಲಿದೆ. ಶಾಕ್ ಹೊಡೆದಿದ್ದರಿಂದ ನಾಯಿ ಗದ್ದೆಯಲ್ಲಿ ಬಿದ್ದು ಹೊರಳಾಡುವುದನ್ನು ನೋಡಿ ಆಶ್ನಿ ನಾಯಿಯ ರಕ್ಷಣೆಗೆ ಮುಂದಾಗಿದ್ದು ಈ ವೇಳೆ ಗಮನಿಸದೇ ತುಂಡಾಗಿ ಬಿದ್ದಿದ್ದ ತಂತಿ ತುಳಿದು ಶಾಕ್ ಗೆ ಒಳಗಾಗಿ ಮೃತಪಟ್ಟಿದ್ದಾಳೆ.
ಭಾರೀ ಪ್ರಮಾಣದಲ್ಲಿ ಗಾಳಿ ಮತ್ತು ಮಳೆಯಿಂದ ವಿದ್ಯುತ್ ತಂತಿ ತುಂಡಾಗಿ ಗದ್ದೆಯಲ್ಲಿ ಬಿದ್ದಿದ್ದರಿಂದ ಈ ಅನಾಹುತ ನಡೆದಿದೆ.