ವಿಟ್ಲ, ಮೇ 16 (Daijiworld News/SM): ವಿಟ್ಲದ ವೀರಕಂಭ ಗ್ರಾಮದ ಕೆಲಿಂಜ ಎಂಬಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಮನೆ ಭಾಗಶಃ ಹಾನಿಗೊಂಡಿದ ಘಟನೆ ಮೇ ೧೬ರ ಗುರುವಾರದಂದು ನಡೆದಿದೆ. ಘಟನೆಯಲ್ಲಿ ಏಳು ಲಕ್ಷ ರೂಪಾಯಿ ಬೆಲೆಬಾಳುವ ಅಡಕೆ ಸುಟ್ಟು ಕರಕಲಾಗಿದೆ.
ಕೆಲಿಂಜ ನಿವಾಸಿ ಜೂಲಿಯಾನ್ ಪಾಯಸ್ ಅವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಇವರ ಮನೆಯ ಒಂದು ಭಾಗ ಸ್ಲ್ಯಾಪ್ನಿಂದ ಇನ್ನೊಂದು ಭಾಗ ಹಂಚು ಪಕ್ಕಾಸ್ನಿಂದ ನಿರ್ಮಿಸಲಾಗಿದೆ. ಮಧ್ಯರಾತ್ರಿ ಮನೆಯ ಒಳಗಡೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಹಂಚಿನ ಛಾವಣಿಯಲ್ಲಿ ಒಣಗಿಸಲು ಇಟ್ಟಿದ್ದ ಒಣ ಅಡಕೆ ಸುಟ್ಟು ಕರಕಲಾಗಿದೆ. ಹಂಚಿನ ಭಾಗದ ನಾಲ್ಕು ಕೋಣೆಗಳಿಗೂ ಬೆಂಕಿ ಆವರಿಸಿಕೊಂಡು ವಸ್ತುಗಳು ಕರಕಲಾಗಿದೆ.
ಮನೆಯಲ್ಲಿ ಆರು ಮಂದಿ ಬೇರೆ ಬೇರೆ ಕೋಣೆಯಲ್ಲಿ ಮಲಗಿದ್ದರು. ಬೆಳಗ್ಗೆ 5 ಗಂಟೆ ವೇಳೆ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಮನೆಮಂದಿ ಎಚ್ಚರಗೊಂಡಿದ್ದು, ಬೆಂಕಿ ನಂದಿಸಲು ಮುಂದಾಗಿದ್ದಾರೆ. ಈ ಸಂದರ್ಭ ಇಬ್ಬರು ಗಾಯಗೊಂಡಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸಿದಂತೆ ಅನಿಲ ಸಿಲಿಂಡರ್ಗಳನ್ನು ಹೊರಗಡೆ ಎಸೆಯಲಾಗಿದೆ. ಅಷ್ಟೊತ್ತಿಗೆ ಮನೆಯ ಪಕ್ಕಾಸು, ಅದರ ಮುಚ್ಚಿಗೆ, ಚಯರ್ಗಳು, ಫ್ಯಾನ್, ಕಪಾಟು, ಸೇರಿದಂತೆ ಮನೆಯ ವೈಯರಿಂಗ್ ಸಂಪೂರ್ಣವಾಗಿ ನಾಶವಾಗಿದೆ.
ಎರಡು ವರ್ಷಗಳ ಕಾಲ ಇಟ್ಟಿದ್ದ ಸುಮಾರು ಏಳು ಲಕ್ಷ ರೂಪಾಯಿ ಬೆಲೆಬಾಳುವ ಅಡಕೆ ರಾಶಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಂಕಿ ಅವಘಡದಿಂದ ಒಟ್ಟು ಅಂದಾಜು 12 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.