ಬಂಟ್ವಾಳ, ಜು. 19(DaijiworldNews/AA): ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯುಂಟಾಗಿದ್ದು, ಮನೆ ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಬಂಟ್ವಾಳದ ಕೇಪು ಗ್ರಾಮದ ಚೆಲ್ಲಡ್ಕ ಎಂಬಲ್ಲಿ ಜು.19ರ ತಡರಾತ್ರಿ ನಡೆದಿದೆ.
ಚೆಲ್ಲಡ್ಕ ಶಶಿಶೇಖರ ಭಂಡಾರಿ ಎಂಬವರ ಮನೆಗೆ ಸಿಡಿಲು ಬಡಿದು ಈ ದುರ್ಘಟನೆ ಸಂಭವಿಸಿದೆ. ಘಟನೆಯಿಂದಾಗಿ ಮನೆಯೊಳಗಿದ್ದ ಫ್ರಿಡ್ಜ್, ಗ್ರೈಂಡರ್, ಇಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗಿದೆ. ಸಿಡಿಲು ಬಡಿದ ಪರಿಣಾಮ ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಬೆಂಕಿ ಉಂಟಾದ ಹಿನ್ನೆಲೆಯಲ್ಲಿ ಮನೆಯ ಒಂದು ಭಾಗ ಬೆಂಕಿಗಾಹುತಿಯಾಗಿದೆ.
ಸ್ಥಳೀಯ ಯುವಕರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಬೆಂಕಿ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿದ್ದು ಅವರು ಸ್ಥಳಕಾಗಮಿಸಿ ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.
ಘಟನೆ ನಡೆಯುವ ವೇಳೆ ಮನೆಯೊಳಗಿದ್ದ ಶಶಿಶೇಖರ ಭಂಡಾರಿ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕೇಪು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲದಾಸ್ ಭಕ್ತ, ಪಂಚಾಯತ್ ಅಧ್ಯಕ್ಷರಾದ ರಾಘವ ಸಾರಡ್ಕ, ಪಂಚಾಯತ್ ಸದಸ್ಯರಾದ ಜಗಜೀವನ್ ರಾಮ್ ಶೆಟ್ಟಿ ಮೈರ, ಪುರುಷೋತ್ತಮ ಕಲ್ಲಂಗಳ, ಬಿಜೆಪಿ ಮುಖಂಡರಾದ ರಾಜೀವ ಭಂಡಾರಿ ಕುಂಡಕೋಳಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ವಿಎ ಕಚೇರಿ ಸಿಬ್ಬಂದಿ ಗಣೇಶ್ ಪ್ರಭು ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.