ಬೆಳ್ತಂಗಡಿ, ಜು. 19(DaijiworldNews/AA): ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಇದೀಗ ನಿನ್ನೆ ರಾತ್ರಿ ಸುರಿದ ವಿಪರೀತ ಮಳೆಗೆ ಬೆಳ್ತಂಗಡಿಯ ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿಯ ಕಲ್ಲರ್ಬಿ ಎಂಬಲ್ಲಿ ಭಾರಿ ಗಾತ್ರದ ಗುಡ್ಡ ಕುಸಿತಗೊಂಡಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ತೆರವು ಕಾರ್ಯಾಚರಣೆಗೆ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದ್ದು ಕೆಲವೇ ಸಮಯದಲ್ಲಿ ಮಣ್ಣು ತೆರವು ಕಾರ್ಯಚರಣೆ ನಡೆಯಲಿದೆ. ಸಂಪೂರ್ಣ ಮಣ್ಣು ತೆರವು ಕಾರ್ಯ ನಡೆಯುವರೆಗೆ ಬಂದಾರು - ಕುಂಟಾಲಪಲ್ಕೆ - ಪೆರ್ಲ ಬೈಪಾಡಿ ಸಂಚರಿಸುವ ಪ್ರತಿಯೊಂದು ವಾಹನಗಳು ಮೈರೋಳ್ತಡ್ಕ - ಶಿವನಗರ - ಪೆರ್ಲಬೈಪಾಡಿ ಮಾರ್ಗವಾಗಿ ಸಂಚರಿಸಲು ವಿನಂತಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ರಸ್ತೆ ಸಂಪೂರ್ಣ ಬಂದ್ ಆಗಿರುವ ಬಗ್ಗೆ ಬಂದಾರು ಗ್ರಾಮ ಪಂಚಾಯತ್ ನಿಂದ ಬಂದಾರು ಹಾಗೂ ಪೆರ್ಲ ಬೈಪಾಡಿಯಲ್ಲಿ ಪ್ರಕಟಣೆಯ ಬ್ಯಾನರ್ ಅಳವಡಿಸಲಾಗಿದೆ. ಘಟನಾ ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ, ಪಂಚಾಯತ್ ಸದಸ್ಯರಾದ ಚೇತನ್ ಭೇಟಿ ನೀಡಿದ್ದಾರೆ. ಇನ್ನು ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್, ಅನಿತಾ, ಭಾರತಿ ಸ್ಥಳದಲ್ಲಿದ್ದಾರೆ.