ಕುಂದಾಪುರ, ಜು 19 (DaijiworldNews/MS): ಚಿತ್ರಪ್ಪಾಡಿ ವ್ಯಾಪ್ತಿಯ ಹಿರೇಹೊಳೆಯಲ್ಲಿ ಹೂಳು ತುಂಬಿದ ಕಾರಣ ಮಳೆಗಾಲದಲ್ಲಿ ಪ್ರತೀ ವರ್ಷ ನೆರೆ ಹಾವಳಿ ಹೆಚ್ಚುತ್ತಿದೆ ಎಂದು ಚಿತ್ರಪಾಡಿ ಮತ್ತು ಕಾರ್ಕಡ ಬಡಾಹೋಳಿ ರೈತರು ಹಾಗೂ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗೋಷ್ಟಿ ಮಾತನಾಡಿದ ಅವರು, ಕಾರ್ಕಡ ಬಡಾಹೋಳಿಯ ಕೃಷಿ ಭೂಮಿ ಮತ್ತು ಮನೆಗಳು ಪ್ರತಿ ಮಳೆಗಾಲದಲ್ಲಿ ಸಣ್ಣ ಮಳೆಗೂ ಜಲಾವೃತ್ತವಾಗುತ್ತಿದೆ. ಈ ಬಾರಿ ಸುಮಾರು 20 ಕ್ಕೂ ಹೆಚ್ಚು ಮನೆ ಜಲಾವೃತ್ತವಾಗಿದ್ದು, ನೂರು ಎಕ್ರೆ ಕೃಷಿ ಪ್ರದೇಶ ನಾಶವಾಗಿದೆ. ಅದರಲ್ಲಿ ಚಿತ್ರಪಾಡಿ ವ್ಯಾಪ್ತಿಯ 60 ಎಕ್ರೆ ಕೃಷಿ ಭೂಮಿ ಇನ್ನೂ ಕೂಡ ನಾಟಿ ಮಾಡುವ ಸ್ಥಿತಿ ಸಾಧ್ಯವಾಗಿಲ್ಲ. ಇದಕ್ಕೆಲ್ಲ ಈ ಭಾಗದಲ್ಲಿ ಹಿರೇ ಹೊಳೆ ಎನ್ನುವ ಹೊಳೆಯಲ್ಲಿ ಹೂಳು ತುಂಬಿದ್ದೇ ಕಾರಣ ಎಂದಿದ್ದಾರೆ.
ಚಿತ್ರಪಾಡಿಯಿಂದ ಹೋಗುವ ಹೊಳೆ ನೀರು ಸರಾಗವಾಗಿ ಹರಿಯಲು ಅಲ್ಲಲ್ಲಿ ಇರುವ ದಿಬ್ಬಗಳು ತಡೆಯಾಗಿದೆ. 12 ವರ್ಷಗಳಿಂದ ಹೂಳು ತೆಗೆದಿಲ್ಲ. ಐದಾರು ವರ್ಷದಿಂದ ಮತ್ತೆ ನೆರೆ ಸಮಸ್ಯೆ ಉಂಟಾಗಿದೆ. ಮಂಗಳವಾರದ ನೆರೆಯಿಂದ ಮನೆ ಮತ್ತು ಕೃಷಿ ಭೂಮಿ ಜಲಾವೃತ್ತವಾಗಿದ್ದು ಪಟ್ಟಣ ಪಂಚಾಯತ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಾಕ್ಷಿಯಾಗಿದ್ದಾರೆ. ಅಲ್ಲದೇ ಕೋಟ ಸೈಬ್ರಕಟ್ಟೆ ರಸ್ತೆಯ ಬನ್ನಾಡಿ ರಸ್ತೆ ಸಂಪೂರ್ಣ ಮುಳುಗಡೆಯಾಗಿತ್ತು.
ಇದೀಗ ಕಿರು ಸೇತುವೆ ನಿರ್ಮಾಣವಾಗುತ್ತಿದ್ದು, ಪೂರ್ಣಗೊಂಡರೆ ನೀರಿನ ಪ್ರಮಾಣ 5 ಪಟ್ಟು ಹೆಚ್ಚಾಗಲಿದೆ. ಇದರಿಂದ ಚಿತ್ರಪಾಡಿ ಮತ್ತು ಕಾರ್ಕಡ ಬೈಲು ಅಪಾರ ಅನಾಹುತಕ್ಕೆ ಬಲಿಯಾಗಲಿದೆ. ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯತ್ ಮತ್ತು ಕಂದಾಯ ಇಲಾಖೆಯು ಸಂಬಂಧಪಟ್ಟ ಇಲಾಖೆಗೆ ಸ್ಪಷ್ಟ ವರದಿ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ರಮೇಶ್ ಮೆಂಡನ್, ಉಮೇಶ್ ಹೆಬ್ಬಾರ್, ಕೆ.ಶಿವರಾಮ ಕಾರಂತ, ಶ್ರೀನಿವಾಸ್ ಕಾರಂತ, ಕೇಶವ ನಾಯರಿ, ಸುರೇಶ್ ಮೆಂಡನ್, ಚಂದ್ರ ಕಾರ್ಕಡ ಮೊದಲಾದವರು ಉಪಸ್ಥಿತರಿದ್ದರು.