ಉಡುಪಿ, ಜು. 18(DaijiworldNews/AK): ಕಾರ್ಕಳ ತಾಲೂಕಿನ ದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಲ್ಮಗುಂಡಿಯಲ್ಲಿ ಸ್ವರ್ಣ ಹೊಳೆಗೆ ಅಡ್ಡವಾಗಿ ನಿರ್ಮಿಸಲಾಗಿದ್ದ ಕಿಂಡಿಅಣ್ಣೆಕಟ್ಟನ್ನು ಖಾಸಗಿ ವಿದ್ಯುತ್ ಕಂಪೆನಿಯೊಂದು ಮೇಲ್ಮಟ್ಟಕ್ಕೇರಿದ ಹೈಡ್ರೋಲಿಕ್ ಗೇಟ್ ಅಳವಡಿಸಿ ಅದರಿಂದ ಹೊರಹೋಗುವ ನೀರಿನ ಮೂಲಕ ಜಲವಿದ್ಯುತ್ ಉತ್ಪಾದಿಸುತ್ತಿದೆ.
ಗ್ರಾಮಸ್ಥರು ಮುಳುಗಿದರೂ ತೊಂದರೆ ಇಲ್ಲ. ಖಜಾನೆಗೆ ಹಣ ಬಂದರೆ ಸಾಕೆಂಬಂತೆ ವರ್ತಿಸುವ ವಿದ್ಯುತ್ ಉತ್ಪಾದಕ ಕಂಪೆನಿಯೂ ಕಳೆದ ಕೆಲ ದಿನಗಳಲ್ಲಿ ವರ್ತಿಸಿದ ರೀತಿ ಜಗಜಾಹೀರು ಗೊಂಡಿದೆ.
ಎಡೆಬಿಡದೇ ಮಳೆ ಸುರಿಯುತ್ತಿದ್ದರೂ ಹೈಡ್ರೋಲಿಕ್ ಗೇಟ್ ಗಳನ್ನು ಇನ್ನೂ ತೆರೆಯದೇ ಜಿಲ್ಲಾಡಳಿತಕ್ಕೆ ಸವಾಲು ಒಡ್ಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಜುಲಾಯಿ ತಿಂಗಳ ಮೊದಲವಾರದಲ್ಲೂ ಇಂತಹ ಪ್ರಸಂಗ ನಡೆದಾಗ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮವಾಗಿ ಕಾರ್ಕಳ ಪುರಸಭೆ ವಿದ್ಯುತ್ ಕಂಪೆನಿಗೆ ಚಾಟಿ ಬೀಸಿತು.
ಪರಿಣಾಮವಾಗಿ ಹೈಡ್ರೋಲಿಕ್ ಗೇಟ್ ಒಂದಿಷ್ಟು ತೆರೆದುಕೊಂಡ ಪರಿಣಾಮವಾಗಿ ಕಿಂಡಿಅಣೆಕಟ್ಟಿನಲ್ಲಿ ಶೇಖರಣೆ ಗೊಂಡಿದ್ದ ಹೆಚ್ಚುವರಿ ನೀರು ಹೊರ ಹರಿದಿದ್ದು, ಕೃತಕ ನೆರೆಗೆ ತಾತ್ಕಾಲಿಕ ಮುಕ್ತಿ ದೊರೆತ್ತಿತ್ತು.
ಕಳೆದ ಒಂದುವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಪಶ್ವಿಮಘಟ್ಟದಿಂದ ಹರಿದುಬರುವ ಮಳೆ ನೀರು ಮುಂಡ್ಲಿ ಯ ಬಲ್ಮಗುಂಡಿ ಪರಿಸರದಲ್ಲಿ ಶೇಖರಣೆಗೊಂಡು ಬೆಲೆಬಾಳುವ ಕೃಷಿ ಸಂಪತ್ತು ನಾಶಗೊಂಡಿದೆ.ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಎಚ್ಚೆತ್ತುಗೊಳ್ಳುವ ತುರ್ತು ಅಗತ್ಯ ಇದೆ.