ಉಡುಪಿ, ಜು 18 (DaijiworldNews/MS): ಸಗ್ರಿ ರೈಲು ಸೇತುವೆ ಸನಿಹದ ರೈಲು ಹಳಿಯ ಬಳಿ, ವ್ಯಕ್ತಿಯೊಬ್ಬರ ಶವವು ಬುಧವಾರ ತಡರಾತ್ರಿ ಪತ್ತೆಯಾಗಿರುವ ಘಟನೆ ನಡೆದಿದೆ. ಸ್ಥಳಕ್ಕೆ ಧಾವಿಸಿ ಬಂದ ಮಣಿಪಾಲ ಠಾಣೆಯ ಎಸ್ ಐ ರಾಘವೇಂದ್ರ ಸಿ, ಮತ್ತು ಅವರ ತಂಡ ಮಹಜರು ಪ್ರಕ್ರಿಯೆ ನಡೆಸಿದ ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡುವರ ಸಹಕಾರದಿಂದ ಮಣಿಪಾಲದ ಶವ ರಕ್ಷಣಾ ಘಟಕದಲ್ಲಿ ಶವ ರಕ್ಷಿಸಿಡುವ ವ್ಯವಸ್ಥೆಗೊಳಿಸಿದರು.
ಮೃತ ವ್ಯಕ್ತಿಯ ತಲೆ ಭಾಗ ಛಿದ್ರವಾಗಿದ್ದು, ರೈಲು ಬಡಿದು ಘಟನೆ ಸಂಭವಿಸಿರುವುದೆಂದು ತಿಳಿದುಬಂದಿದ್ದು. ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಲಭ್ಯವಾದ ಆಧಾರ್ ಚೀಟಿಯ ಮೂಲಕ ಮೃತ ವ್ಯಕ್ತಿಯನ್ನು ಉಡುಪಿ ಮೂಡಬೆಟ್ಟು ನಿವಾಸಿ ಪ್ರಸಾದ್ ಆಚಾರ್ಯ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿದ್ದು ಮಣಿಪಾಲ ಪೋಲಿಸರು ಮತ್ತು ರೈಲ್ವೆ ಪೋಲಿಸರು ಕಾನೂನು ಪ್ರಕ್ರಿಯೆ ನಡೆಸಿದರು.