ವರದಿ - ಅಹಮ್ಮದ್ ಬಾವಾ
ಮಂಗಳೂರು, ಮೇ16(Daijiworld News/SS): ಪಚ್ಚನಾಡಿಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಿಂದ ಹೊರಬರುವ ವಿಷಪೂರಿತ ಹೊಗೆ ಜನರ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ ಎಂಬ ಗಂಭೀರ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ.
ಮಂಗಳೂರಿನ ತ್ಯಾಜ್ಯ ವಿಲೇವಾರಿ ಪ್ರದೇಶ ಪಚ್ಚನಾಡಿಯಲ್ಲಿ ಯಾವಾಗ ತ್ಯಾಜ್ಯಕ್ಕೆ ಬೆಂಕಿ ಬೀಳುತ್ತದೆಯೋ, ಆ ಘಳಿಗೆಯಿಂದ ಅಲ್ಲಿ ವಾಸಿಸುವ ಜನರ ಬದುಕು ನರಕಮಯವಾಗುತ್ತದೆ. ಮೇ.12ರಂದು ರವಿವಾರ ಸಂಜೆ ಕಸದ ರಾಶಿಯ ಒಂದು ಭಾಗಕ್ಕೆ ಬೆಂಕಿ ಬಿದ್ದಿದ್ದು, ಮೇ13ರ ದಿನಪೂರ್ತಿ ಬೆಂಕಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವ್ಯಾಪಿಸಿದೆ. ಈ ಹಿನ್ನೆಲೆಯಲ್ಲಿ, ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಯತ್ನಿಸಿದರೂ ಅದು ಫಲ ನೀಡಲಿಲ್ಲ ಎಂದು ತಿಳಿದುಬಂದಿದೆ. ಪರಿಣಾಮ, ವಿಷಪೂರಿತ ಹೊಗೆ ಮತ್ತಷ್ಟು ವ್ಯಾಪಿಸಿ, ಸ್ಥಳೀಯರ ಉಸಿರಾಟಕ್ಕೂ ತೊಂದರೆಯಾಗಿದೆ.
ಮಂಗಳನಗರ, ಮಂಗಳ ಜ್ಯೋತಿ ವ್ಯಾಪ್ತಿಯ ಹಲವು ಮಂದಿ ತ್ಯಾಜ್ಯದ ರಾಶಿಯಿಂದ ಬಂದ ವಿಷಪೂರಿತ ಹೊಗೆಯಿಂದ ಅಸ್ವಸ್ಥರಾಗಿದ್ದಾರೆ. ಮಂಗಳನಗರ ವ್ಯಾಪ್ತಿಯ ಸುಮಾರು 150ಕ್ಕೂ ಅಧಿಕ ಮನೆಯ ಬಹುತೇಕ ಮಂದಿ ಕೆಮ್ಮು, ವಾಂತಿಯಿಂದ ಬಳಲುತ್ತಿದ್ದಾರೆ. ಬಹುತೇಕರು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.
ಪಚ್ಚನಾಡಿ ಪ್ರದೇಶದ ಹಲವಾರು ಮಂದಿ ವಿಷಪೂರಿತ ಹೊಗೆಯಿಂದಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ತ್ಯಾಜ್ಯ ವಿಲೇವಾರಿ ಪ್ರದೇಶದ ಸಮೀಪದಲ್ಲಿ ಹಲವಾರು ಕುಟುಂಬಗಳು ವಾಸವಾಗಿದ್ದು, ಉಸಿರಾಟದೊಂದಿಗೆ ದೇಹ ಸೇರುವ ಹೊಗೆಯಿಂದಾಗಿ ಜನರಿಗೆ ಅನಾರೋಗ್ಯ ಭೀತಿ ಉಂಟಾಗಿದೆ.
ಸ್ಥಳೀಯ ಮನೆಯವರು ಶೀತ-ಜ್ವರದಿಂದ ಬಳಲುತ್ತಿದ್ದು, ಅನೇಕರಿಗೆ ಹೊಗೆಯಿಂದಾಗಿ ಗಂಟಲು ಕೆರೆತ ಉಂಟಾಗಿದೆ. ಆದರೆ ತ್ಯಾಜ್ಯ ವಿಲೇವಾರಿ ಘಟಕದಿಂದ ಬಂದ ಹೊಗೆ ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದರೆ ನಂಬುವವರೂ ಇಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಎಷ್ಟು ಮಂದಿ ಅನಾರೋಗ್ಯಕ್ಕೊಳಗಾಗಿರುವರೋ ಗೊತ್ತಿಲ್ಲ. ಆದರೆ ಇದನ್ನು ಸಂಬಂಧಪಟ್ಟವರಲ್ಲಿ ತಿಳಿಸಿದರೆ ಪ್ರತಿ ಬಾರಿಯೂ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಪಚ್ಚನಾಡಿಯಲ್ಲಿ ತ್ಯಾಜ್ಯದ ರಾಶಿ ಅಧಿಕವಾಗುತ್ತಿದ್ದಂತೆ ಬೆಂಕಿ ಬೀಳುವ ಘಟನೆ ನಡೆಯುತ್ತಲೇ ಇದೆ. ಅತ್ತ ಗುಜಿರಿ ಹೆಕ್ಕುವವರು ಕೂಡ ಕೆಲವೊಮ್ಮೆ ಬೆಂಕಿ ಕೊಡುತ್ತಿದ್ದಾರೆ ಎಂಬ ಆರೋಪ ಕೂಡಾ ಇದೆ. ಕಸದ ರಾಶಿಯಲ್ಲಿ ರಾಸಾಯನಿಕ ಸಂಯೋಜನೆ, ಮಿಥೇನ್ ಗ್ಯಾಸ್ ಉತ್ಪತ್ತಿ ಆಗುವ ಹಿನ್ನೆಲೆಯಲ್ಲಿ ಬೆಂಕಿ ಪಕ್ಕನೆ ವ್ಯಾಪಿಸುವ ಕಾರಣದಿಂದ ಹೊಗೆಬತ್ತಿಯ ಕಿಡಿಯೂ ಬೆಂಕಿಗೆ ಕಾರಣವಾಗಲೂಬಹುದು. ಈ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಬೆಂಕಿ ವ್ಯಾಪಿಸದಂತೆ ತ್ಯಾಜ್ಯದ ಮೇಲೆ ಮಣ್ಣು ಸುರಿಯಲಾಗುತ್ತಿದೆ. ಸ್ಥಳೀಯರ ಆರೋಗ್ಯ ತಪಾಸಣೆಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.