ಬೈಂದೂರು,ಜು 16(DaijiworldNews/ AK): ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಭಾರಿ ಮಳೆಯಿಂದಾಗಿ ಬೈಂದೂರು ಸಮೀಪದ ಒತ್ತಿನೆಣೆಯಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ಗುಡ್ಡ ಕೊರೆಯಲಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಪಕ್ಕದ ಗುಡ್ಡ ಕುಸಿಯುವ ಭೀತಿಯಲ್ಲಿದೆ.
ಪ್ರತಿವರ್ಷದ ಮಳೆಗಾಲದ ಸಂದರ್ಭದಲ್ಲಿಯೂ ಇಲ್ಲಿ ಗುಡ್ಡ ಕುಸಿಯುವ ಭೀತಿ ಸೃಷ್ಟಿಯಾಗುತ್ತದೆ. ಸದ್ಯ ಒತ್ತಿನೆಣೆಯಲ್ಲಿ ನಿಧಾನವಾಗಿ ಗುಡ್ಡ ಜರಿಯಲು ಶುರುವಾಗಿದ್ದು, ಮಳೆ ಹೀಗೆ ಮುಂದುವರೆದರೆ ಸಂಪೂರ್ಣ ಗುಡ್ಡವೂ ಹೆದ್ದಾರಿ ಮೇಲೆ ಕುಸಿಯುವ ಆತಂಕ ಎದುರಾಗಿದೆ. ಒಂದು ವೇಳೆ ಗುಡ್ಡ ಜರಿದರೆ ಉತ್ತರ ಕನ್ನಡ ಉಡುಪಿ ಸಂಪರ್ಕ ಬಂದ್ ಆಗಲಿದೆ. ವಾಹನ ಸವಾರರು ಭಯದಿಂದಲೇ ದಿನನಿತ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.
ಎಚ್ಚರಿಕೆಯ ಕರೆಗಂಟೆ:
ಐ ಆರ್ ಬಿ ಸಂಸ್ಥೆಯಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲಾಗಿತ್ತು. ಆದರೆ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪ್ರತೀ ವರ್ಷ ಇಂತಹ ಗುಡ್ಡ ಕುಸಿತದ ಭೀತಿ ಎದುರಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.