ಮಂಗಳೂರು, ಮೇ16(Daijiworld News/SS): ಸರ್ಫಿಂಗ್ ಸ್ವಾಮಿ ಫೌಂಡೇಶನ್, ಮಂತ್ರ ಸರ್ಫ್ ಕ್ಲಬ್, ಅಡ್ವೆಂಚರ್ ವರ್ಕ್ಸ್, ಥಂಡರ್ ಮಂಕಿ, ಫೈಯರ್ವೈರ್ ಸರ್ಫ್ ಬೋರ್ಡ್ ಸೇರಿದಂತೆ ಸಂಘಟನೆಗಳ ನೇತೃತ್ವದಲ್ಲಿ ಯುವ ಸರ್ಫರ್ಗಳನ್ನು ಹುಡುಕಿ ಅವರಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2ನೇ ಬಾರಿಗೆ ಕರಾವಳಿಯ ಕಡಲ ಕಿನಾರೆಯಲ್ಲಿ ಮೇ.19ರಂದು ಸಾಹಸಮಯ ಸರ್ಫಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ನಗರದ ಮೂಲ್ಕಿ, ಪಣಂಬೂರು, ತಣ್ಣೀರುಬಾವಿ, ಬೆಂಗರೆ ಸೇರಿದಂತೆ ಕರಾವಳಿಯ ಕಡಲ ಕಿನಾರೆಗಳಲ್ಲಿ ಕಾರ್ಯಾಚರಿಸುತ್ತಿರುವ ಕ್ಲಬ್ಗಳಿಂದ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಕಡಲ ಅಲೆಗಳಲ್ಲಿ ಸಾಹಸ ಮಾಡಲಿದ್ದಾರೆ. ಈಗಾಗಲೇ ಸರ್ಫರ್ಗಳು ಕಡಲ ಕಿನಾರೆಗಳಲ್ಲಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.
ಕರಾವಳಿಯಲ್ಲಿ ಆಯೋಜಿಸಲಾಗಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಯುವ ಸರ್ಫರ್ಗಳಿಗೆ ಮುಂದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸರ್ಫಿಂಗ್ ಫೆಸ್ಟ್ಗಳಲ್ಲಿ ಭಾಗವಹಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಆಯೋಜಕರು ವಿಶೇಷ ಮುತುವರ್ಜಿ ವಹಿಸಿ ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತರಲು ಈ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.
ವಿಶೇಷವೆಂದರೆ ಸರ್ಫಿಂಗ್ ಸ್ವಾಮಿ ಫೌಂಡೇಶನ್ ವತಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳಿಗಾಗಿ ಉಚಿತ ತರಬೇತಿ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಮೇ 19ರಂದು ಭಾನುವಾರ ಬೆಳಗ್ಗೆ 7 ಗಂಟೆಯಿಂದ 11 ಗಂಟೆ ವರೆಗೆ ಈ ಸ್ಪರ್ಧೆ ನಡೆಯಲಿದೆ. 7 ವರ್ಷದ ಮಕ್ಕಳಿಂದ ಹಿಡಿದು 15 ವರ್ಷದವರೆಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ತಿಳಿದುಬಂದಿದೆ.