ಬಂಟ್ವಾಳ, ಜು 15(DaijiworldNews/ AK): ತಾಲೂಕಿನಾದ್ಯಂತ ಸೋಮವಾರ ಭಾರೀ ಮಳೆಯಾಗಿದ್ದು, ಹಲವೆಡೆ ಹಾನಿ ಸಂಭವಿಸಿದ್ದು, ನೇತ್ರಾವತಿ ನದಿ ಮೈತುಂಬಿ ಹರಿಯುತ್ತಿದೆ. ಸೋಮವಾರ ಬೆಳಗ್ಗೆ 3.1 ಮೀಟರ್ ನಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿನೀರಿನಮಟ್ಟ ಸಂಜೆ ವೇಳೆಗೆ 6 ಮೀಟರ್ ದಾಟಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಡಳಿತ ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದಾರೆ.ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ಸುಬ್ಬ ಪಾಟಾಳಿ ಬಿನ್ ಶಂಕರ ಪಾಟಾಳಿ ಎಂಬವರ ವಾಸ್ತವ್ಯದ ಮನೆಗೆ ತೆಂಗಿನ ಮರ ಬಿದ್ದು ತೀವ್ರ ಹಾನಿಯಾಗಿರುತ್ತದೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ.
ಅಮ್ಟಾಡಿ ಗ್ರಾಮದ ಕಲಾಯಿಕೋಡಿ ಎಂಬಲ್ಲಿ ಚಂದ್ರಶೇಖರ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.