ಕುಂದಾಪುರ, ಜು. 15(DaijiworldNews/AK): ಕೊಂಕಣ ರೈಲ್ವೆಯ ಮತ್ತು ಕುಂದಾಪುರ ರೈಲು ಸೇವೆಗೆ ಸಂಬಂಧಿತ ವಿಷಯಗಳ ಕುರಿತು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರಿಗೆ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿಯಿಂದ ಮನವಿ ನೀಡಲಾಯಿತು.
ಇದೇ ಸಂದರ್ಭ ನಡೆದ ಸಭೆಯಲ್ಲಿ ಕೊಂಕಣ ರೈಲ್ವೆ ಪಾಲುದಾರ ರಾಜ್ಯವಾದ ಕರ್ನಾಟಕ ತನ್ನ ಪಾಲಿನ 270 ಕೋಟಿ ಮೌಲ್ಯದ ಶೇರನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವ ಮೂಲಕ ಕೊಂಕಣ ನಿಗಮವನ್ನು ಭಾರತೀಯ ರೈಲ್ವೇ ಜತೆ ವಿಲೀನ ಮಾಡಬೇಕು ಅಥವಾ ತನ್ನ ಪಾಲುದಾರಿಕಾ ಉದ್ಯಮವಾದ ಕೊಂಕಣ ನಿಗಮದ ಶೇರನ್ನು ಇಟ್ಟುಕೊಳ್ಳುವುದಾದರೆ, ತಕ್ಷಣವೇ ರಾಜ್ಯದ ಹಳಿ ಡಬ್ಲಿಂಗ್ ಮಾಡಲು ಬೇಕಾದ ಸುಮಾರು 2000 ಕೋಟಿ ಹಣವನ್ನು ಕೊಂಕಣ ನಿಗಮಕ್ಕೆ ನೀಡಿ ಕರಾವಳಿಯ ಜನರ ರೈಲು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ರಾಜ್ಯವನ್ನು ಶಾಸಕರು ವಿಧಾನ ಮಂಡಲದಲ್ಲಿ ಪ್ರಶ್ನಿಸಲು ತೀರ್ಮಾನಿಸಲಾಯಿತು.
ಕುಂದಾಪುರ ಬೆಂಗಳೂರು ಮದ್ಯೆ ಹೊಸ ಪಡೀಲ್ ಬೈಪಾಸ್ ರೈಲಿಗೆ ಬೇಡಿಕೆ ಸಲ್ಲಿಸಲಾಯಿತು. ಕುಂದಾಪುರ ರೈಲು ನಿಲ್ದಾಣದ ಮೇಲ್ದರ್ಜೆ ಸಂಬಂಧಿಸಿ ಆಗಬೇಕಾದ ಕೆಲಸಗಳನ್ನು ಶಾಸಕರ ನೇತೃತ್ವದಲ್ಲಿ ಕೈಗೊಳ್ಳುವ ಕುರಿತು ಹಾಗೂ ಸಂಸದರ ಜತೆ ಸಭೆ ನಡೆಸುವ ಕುರಿತು ತೀರ್ಮಾನಿಸಲಾಯಿತು. ಕುಂದಾಪುರ ರೈಲು ನಿಲ್ದಾಣ ಸಂಪರ್ಕ ರಸ್ತೆಯ ಪಾದಾಚಾರಿ ಮಾರ್ಗಗಳ ಹುಲ್ಲು ಕಟಾವು ಬಗ್ಗೆ ಸ್ಥಳೀಯಾಡಳಿತಕ್ಕೆ ಸೂಚನೆ ನೀಡಲಾಯಿತು.