ಉಡುಪಿ, ಜು. 14(DaijiworldNews/AA): ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕರಾವಳಿ ಮಲೆನಾಡಿನ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಈ ಮಧ್ಯೆ ಆಗುಂಬೆಯಲ್ಲಿ ಲಘು ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ವಾಹನ ಸವಾರರು ಎಚ್ಚರಿಕೆ ವಹಿಸಬೇಕಾಗಿದೆ.
ಭಾರಿ ಮಳೆಗೆ ಶಿವಮೊಗ್ಗ ಮತ್ತು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿಯ 4ನೇ ತಿರುವಿನಲ್ಲಿ ಗುಡ್ಡ ಕುಸಿದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಮಣ್ಣು ತೆರವು ಕಾರ್ಯ ನಡೆಸುತ್ತಿದ್ದಾರೆ. ಹೀಗಾಗಿ ವಾಹನ ಚಾಲಕರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಗುಡ್ಡ ಮತ್ತಷ್ಟು ಕುಸಿದರೆ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಈಗಾಗಲೇ ಈ ಹೆದ್ದಾರಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಹೀಗಾಗಿ ಈ ಮಾರ್ಗವಾಗಿ ಹೋಗುವ ವಾಹನಗಳು ಹುಲಿಕಲ್ ಘಾಟಿ ಮಾರ್ಗವಾಗಿ ಸಂಚರಿಸುತ್ತಿವೆ.
ಇನ್ನು ಈಗ ಆಗುಂಬೆ ಘಾಟಿಯ 5ನೇ ತಿರುವಿನಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿಯಲು ಆರಂಭವಾಗಿದೆ. ಹೀಗಾಗಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಿದೆ.