ಪಡುಬಿದ್ರಿ, ಜು. 13(DaijiworldNews/AA): ಪ್ರಕರಣವೊಂದರಲ್ಲಿ ಭಾಗಿಯಾಗಿ ಜಾಮೀನು ಮೇರೆಗೆ ಬಿಡುಗಡೆಗೊಂಡು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಕಳೆದ 29 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪಡುಬಿದ್ರಿ ಪೊಲೀಸರು ಮಂಗಳೂರಿನ ವೆಲನ್ಸಿಯಾ ಎಂಬಲ್ಲಿ ಬಂಧಿಸಿದ್ದಾರೆ.
ಬಶೀರ್ ಅಹಮ್ಮದ್ ಬಂಧಿತ ಆರೋಪಿಯಾಗಿದ್ದಾನೆ.
ಘಟನೆಯ ವಿವರ:
1995 ಜನವರಿ 10 ರಂದು ಸಂಜೆ ಸುಮಾರು 5 ಗಂಟೆ ಸಮಯಕ್ಕೆ ಪ್ರಕರಣವೊಂದು ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಕಾಪುವಿನ ತೆಂಕ ಎರ್ಮಾಳ್ ನಿವಾಸಿ ಸುಲೈಮಾನ್ ಪ್ರಕರಣದ ದೂರುದಾರ.
ಪಡುಬಿದ್ರಿ ಪೇಟೆಯಲ್ಲಿ ನಿಂತಿದ್ದಾಗ ಸುಲೈಮಾನ್ ನಿಂತು ಕೊಂಡಿದ್ದಾಗ ಗೆಳೆಯ ಮಂಗಳೂರಿನ ಕುದ್ರೋಳಿ ನಿವಾಸಿ ಉಮ್ಮರ್ ಫಾರೂಕು ಆತನ ಸ್ನೇಹಿತರಾದ ಮಂಗಳೂರು ಕುದ್ರೋಳಿ ವಾಸಿಗಳಾದ ಬಶೀರ್ ಅಹಮ್ಮದ್, ಆರೀಫ್,ಮುಸ್ತಫಾ ರವರೊಂದಿಗೆ ಅಲ್ಲಿಗೆ ಬಂದಿದ್ದರು.
ಸುಲೈಮಾನ್ ಅವರನ್ನು ತಡೆದು ನಿಲ್ಲಿಸಿದ ಆ ತಂಡ ಬರಬೇಕಾದ ಹಣವನ್ನು ವಾಪಾಸ್ಸು ಕೊಡುವಂತೆ ಹೇಳಿದರು. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿದ್ದರು.
ಈ ಬಗ್ಗೆ ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಅಗಮಿಸಿದ ಪಡುಬಿದ್ರಿ ಠಾಣಾ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಠಾಣೆಯಲ್ಲಿ ಜಾಮೀನು ಮೇಲೆ ಬಿಡುಗಡೆಗೊಳಿಸಿದ್ದರು.
ಆರೋಪಿಗಳಲ್ಲಿ ಆರೀಫ್ ಮತ್ತು ಮುಸ್ತಾಫ ನ್ಯಾಯಾಲಯದ ವಿಚಾರಣೆ ಸಮಯ ಹಾಜರಾಗಿ ಪ್ರಕರಣದಲ್ಲಿ ಖುಲಾಸೆಯಾಗಿರುತ್ತಾರೆ. ಉಳಿದ ಆರೋಪಿಗಳಾದ ಉಮ್ಮರ್ ಫಾರೂಕು ಮತ್ತು ಬಶೀರ್ ಅಹಮ್ಮದ್ ಸ್ಟೇಷನ್ ಅಲ್ಲಿ ಜಾಮೀನು ಪಡೆದು ಹೋದವರು 29 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ನ್ಯಾಯಾಲಯವು ಆರೋಪಿಗಳಿಗೆ ಎಲ್ ಪಿ ಸಿ(LPC) ವಾರಂಟನ್ನು ಹೊರಡಿಸಿರುತ್ತದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಪಡುಬಿದ್ರಿ ಪೊಲೀಸ್ ಠಾಣಾ ಪಿ ಎಸ್ ಐ ಪ್ರಸನ್ನ ಎಮ್ ಎಸ್ ರವರ ನಿರ್ದೇಶನದಂತೆ ಠಾಣಾ ಸಿಬ್ಬಂದಿಯವರಾದ ಎ ಎಸ್ ಐ ರಾಜೇಶ್ ಪಿ, ಹೆಚ್ ಸಿ ರಾಜೇಶ್ ಹೆರ್ಗ, ಪಿ ಸಿ ಸಂದೇಶ ರವರು ವಾರಂಟ್ ಆಸಾಮಿ ಬಶೀರ್ ಅಹಮ್ಮದ್ ಎಂಬಾತನನ್ನು ಮಂಗಳೂರು ವೆಲನ್ಸಿಯಾ ಬಳಿ ವಶಕ್ಕೆ ಪಡೆದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಆರೋಪಿಗೆ ಜುಲಾಯಿ 15 ರ ತನಕ ನ್ಯಾಯಾಲಯವು ನ್ಯಾಯಾಂಗ ಬಂಧನ ನೀಡಿರುತ್ತದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ 2020 ಡಿಸೆಂಬರ್ 15ರಂದು ಅಸೌಖ್ಯದಿಂದ ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆತನ ಮರಣದ ದೃಢಪತ್ರವನ್ನು ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.