ಪುತ್ತೂರು, ಜು. 13(DaijiworldNews/LS): ಕುಂಬ್ರದ ಕಾರ್ ಡೀಲರ್ ಎಂ.ಎಂ ಸರ್ಫುದ್ದೀನ್ ಅವರಿಗೆ ಹುಬ್ಬಳ್ಳಿಯಿಂದ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಚಿನ್ನವನ್ನು ಅರ್ಧ ದರಕ್ಕೆ ಮಾರಾಟ ಮಾಡುವುದಾಗಿ ಹೇಳಿದ್ದು, ನಿಮಗೆ ಚಿನ್ನ ಬೇಕಾಗಿದ್ದಲ್ಲಿ ಕಾರು ಮಾಡಿಕೊಂಡು ಊರಿಗೆ ಬನ್ನಿ ಎಂಬುದಾಗಿ ಹೇಳಿ ವಂಚಿಸಲು ಮುಂದಾಗಿದ್ದಾನೆ.
ಸರ್ಫುದ್ದೀನ್ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ನಾನು ನಿಮ್ಮ ಸೆಕೆಂಡ್ ಹ್ಯಾಂಡ್ ಶೋರೂಮಿನಿಂದ ಬೈಕ್ ಖರೀದಿಸದ ಗ್ರಾಹಕ ಎಂದು ತಿಳಿಸಿದ್ದಾನೆ. ತನ್ನ ಮನೆ ಕಟ್ಟಲು ಪಾಯ ತೆಗೆಯುವ ವೇಳೆ 6ಕೆಜಿ ಹಳೆಯ ಕಾಲದ ಚಿನ್ನ ಸಿಕ್ಕಿದ್ದು, ಇದನ್ನು ಅರ್ಧ ದರಕ್ಕೆ ಮಾರಾಟ ಮಾಡುವುದಾಗಿ ಹೇಳಿದ್ದಾನೆ. ನಿಮಗೆ ಈ ಚಿನ್ನ ಬೇಕಾಗಿದ್ದಲ್ಲಿ ಕಾರು ಮಾಡಿಕೊಂಡು ಊರಿಗೆ ಬನ್ನಿ ಎಂಬುದಾಗಿ ಹೇಳಿ ವಂಚಿಸಲು ಮುಂದಾಗಿದ್ದಾನೆ.
ಕರೆ ಮಾಡಿದ ವ್ಯಕ್ತಿ 1ಕೆಜಿ ಚಿನ್ನಕ್ಕೆ 30ಲಕ್ಷ ರೂ. ಇದ್ದು, ನಾನು ನಿಮಗೆ ಅರ್ಧ ಬೆಲೆಗೆ ಕೊಡುತ್ತೇನೆ. ನೀವು ಊರಿಗೆ ಬಂದು ಪರಿಶೀಲಿಸಿದ ಬಳಿಕವೇ ಹಣ ಕೊಟ್ಟರೆ ಸಾಕು ಎಂದು ನಂಬಿಕೆ ಹುಟ್ಟಿಸಿದ್ದ.
ಈ ವೇಳೆ ಸರ್ಫುದ್ದೀನ್ ಅವರು ಶೋರೂಂನಿಂದ ಖರೀದಿಸಿದ ಬೈಕ್ ಯಾವುದು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅಪರಿಚಿತ ಸಮರ್ಪಕ ಉತ್ತರ ನೀಡಿಲ್ಲ. ಇದರಿಂದ ಅಪರಿಚಿತನ ಮೋಸದ ವ್ಯವಹಾರ ಬೆಳಕಿಗೆ ಬಂದಿದೆ. ಈ ಹಿಂದೆ ಬೆಳ್ತಂಗಡಿ ಮೂಲದ ಮೂವರು ಇದೇ ರೀತಿಯ ಕರೆಯನ್ನು ನಂಬಿ ಪ್ರಾಣ ಕಳೆದುಕೊಂಡ ಘಟನೆ ತಿಳಿದಿದ್ದ ಸರ್ಫುದ್ದೀನ್ ಅವರು ಈ ಕರೆಯನ್ನು ದಾಖಲಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.