ಮಂಗಳೂರು,ಮೇ 16 (Daijiworld News/MSP): ದೇಶ- ವಿದೇಶಗಳಿಂದ ಕಡಲನಗರಿ ಮಂಗಳೂರಿಗೆ ವಿಮಾನದ ಮೂಲಕ ಆಗಮಿಸುವ ಯಾತ್ರಿಕರಿಗೆ ಹಾಗೂ ಪ್ರವಾಸಿಗರಿಗೆ ಕರಾವಳಿ ಜಿಲ್ಲೆಯ ಸಂಸ್ಕೃತಿ- ಪ್ರಾದೇಶಿಕ ಸೊಗಡನ್ನು ಭಿತ್ತರಪಡಿಸುವ ಉದ್ದೇಶದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ಅಪರೂಪದ ಶಿಲ್ಪಕಲೆಯನ್ನು ಅನಾವರಣಗೊಳಿಸಲಾಗಿದೆ.
ಕರಾವಳಿಯ ಸಂಸ್ಕೃತಿಯ ಭಾಗವಾಗಿರುವ ಹುಲಿವೇಷದ ಕುಣಿತ ಇಲ್ಲಿನ ಜಾನಪದ ಸಾಂಸ್ಕೃತಿಕ ಕಲೆ. ತಾರ್ಸೆ, ಡೋಲಿನ ಲಯಕ್ಕೆ ವೇಷಧಾರಿಗಳು ಪ್ರದರ್ಶಿಸುವ ಆಟಗಳ ವರಸೆಯ ಪಿಲಿನಲಿಕೆ ಇತೆರೆಡೆಗಿಂತ ಭಿನ್ನವಾಗಿ ನಿಲ್ಲುತ್ತದೆ. ಇದೇ ಹಿನ್ನಲೆಯಲ್ಲಿ ಇಲ್ಲಿನ ಮಣ್ಣಿನ ಸೊಗಡನ್ನು ಸಾರುವ ಪಿಲಿನಲಿಕೆಯ ಶಿಲ್ಪಕಲೆಯನ್ನು ವಿಮಾನ ನಿಲ್ದಾಣ ಅನಾವರಣಗೊಳಿಸಲಾಗಿದ್ದು ಇದು ಪ್ರಯಾಣಿಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಸಪ್ತ ಗೋಳ ಆಕೃತಿಯಲ್ಲಿ ಪಿಲಿನಲಿಕೆಯ ಸಪ್ತ ಭಂಗಿಗಳು ರಾರಾಜಿಸುತ್ತಿರುವ ಈ ಶಿಲ್ಪಕಲೆಯ ಮೂಲಕ ವಿಭಿನ್ನ ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ಸಿಂಗರಿಸಲಾಗಿದೆ. ಇದಲ್ಲದೆ ಮತ್ತಷ್ಟು ಶಿಲ್ಪಕಲೆ, ಚಿತ್ರಕಲೆಯ ಮೂಲಕ ವಿಮಾನ ನಿಲ್ದಾನವನ್ನು ಸಿಂಗರಿಸಲು ಸಿದ್ಧತೆ ನಡೆಸಲಾಗಿದೆ.
ಪ್ರಾದೇಶಿಕ ಸೊಬಗನ್ನು ಆಯಾಯ ವಿಮಾನ ನಿಲ್ದಾಣದ ಮೂಲಕ ಸಾರಿದರೆ, ನಿಲ್ದಾಣವು ಮತ್ತಷ್ಟು ಅತ್ಯಾಕರ್ಷಕವಾಗಿ ಕಾಣಬಲ್ಲದು. ಇದಲ್ಲದೆ ಬೇರೆ ರಾಜ್ಯ ಅಥವಾ ದೇಶಗಳಿಂದ ಆಗಮಿಸುವವರಿಗೆ ಇಲ್ಲಿನ ಪ್ರಾದೇಶಿಕತೆ ಹಾಗೂ ಸಂಸ್ಕೃತಿಯನ್ನು ಚಿತ್ರಪಟ, ಶಿಲ್ಪಕಲೆಗಳ ಮೂಲಕವೇ ಅರ್ಥ ಮಾಡಿಕೊಳ್ಳಬಹುದು.