ಕಾಸರಗೋಡು, ಮೇ 16 (Daijiworld News/MSP): ಪೆರಿಯದಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಯೋರ್ವನನ್ನು ತನಿಖಾ ತಂಡ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.
ಬಂಧಿತನನ್ನು ಉದುಮ ಪಾಕಂ ನ ಸುಬೀಷ್ ಎಂದು ಗುರುತಿಸಲಾಗಿದೆ. ಕೃತ್ಯದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ ಸುಬೀಷ್ ಊರಿಗೆ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಈತನನ್ನು ಬಂಧಿಸುವಲ್ಲಿ ತನಿಖಾ ತಂಡ ಯಶಸ್ವಿಯಾಗಿದ. ಈತ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಆರೋಪಿಯಾಗಿದ್ದು ಇದರಿಂದ ಪ್ರಕರಣದಲ್ಲಿ ಇದುವರೆಗೆ ಬಂಧಿತ ರಾದವರ ಸಂಖ್ಯೆ ೧೪ ಕ್ಕೇರಿದೆ.
ಫೆಬ್ರವರಿ ೧೭ ರಂದು ರಾತ್ರಿ ಯುವ ಕಾಂಗ್ರೆಸ್ ಕಾರ್ಯಕರ್ತ ರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ರನ್ನು ತಂಡವು ಕೊಲೆಗೈದಿತ್ತು. ಸುಬೀಷ್ ವಿದೇಶಕ್ಕೆ ತೆರಳಿರುವ ಬಗ್ಗೆ ಮಾಹಿತಿ ತಿಳಿದ ಕ್ರೈಂ ಬ್ರಾಂಚ್ ತನಿಖಾ ತಂಡ ಇಂಟರ್ ಪೋಲ್ ನ ನೆರವು ಪಡೆಯಲು ತೀರ್ಮಾನಿಸಿತ್ತು. ಈ ನಡುವೆ ಈತ ಊರಿಗೆ ಮರಳುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಗುರುವಾರ ಮುಂಜಾನೆ ಮಂಗಳೂರು ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ. ತಲೆ ಹೊರೆ ಕೂಲಿ ಕಾರ್ಮಿಕನಾಗಿರುವ ಈತ ಕೃತ್ಯದ ಬಳಿಕ ಕೆಲ ದಿನ ಊರಲ್ಲಿದ್ದು ಬಳಿಕ ವಿದೇಶಕ್ಕೆ ಪರಾರಿಯಾಗಿದ್ದನು.
ಈ ನಡುವೆ ಎರಡು ದಿನಗಳ ಹಿಂದೆ ಬಂಧಿತರಾಗಿದ್ದ ಸಿಪಿಎಂ ಉದುಮ ವಲಯ ಕಾರ್ಯದರ್ಶಿ ಕೆ . ಮಣಿಕಂಠನ್ ಮತ್ತು ಪೆರಿಯ ಸ್ಥಳೀಯ ಸಮಿತಿ ಕಾರ್ಯದರ್ಶಿ ಬಾಲಕೃಷ್ಣನ್ ಗೆ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ.
ಆರೋಪಿಗಳಿಗೆ ಪರಾರಿಗಳು ಹಾಗೂ ತಲೆಮರೆಸಿಕೊಳ್ಳಲು ಸಹಾಯ ಮತ್ತು ಸಾಕ್ಷ್ಯ ನಾಶ ಪ್ರಕರಣಗಳನ್ನು ಇವರಿಬ್ಬರ ಮೇಲೆ ಹೂಡಲಾಗಿದೆ. ತನಿಖೆ ತೃಪ್ತಿಕರವಾಗಿಲ್ಲ, ತನಿಖಾ ತಂಡ ಸಂಚು ನಡೆಸಿದವರನ್ನು ಬಂಧಿಸದೆ ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದುಕುಟುಂಬಸ್ಥರು ಮತ್ತು ಕಾಂಗ್ರೆಸ್ ಆರೋಪಿಸಿದ್ದು, ಪ್ರಕರಣದ ತನಿಖೆಯನ್ನು ಸಿಬಿಐ ಗೆ ಒಪ್ಪಿಸುವಂತೆ ಕೃಪೇಶ್ ಮತ್ತು ಶರತ್ ಲಾಲ್ ಕುಟುಂಬಸ್ಥರು ಹೈಕೋರ್ಟ್ ಗೆ ನೀಡಿರುವ ಜಾಮೀನು ಅರ್ಜಿಯ ವಿಚಾರಣೆ ಮೇ ೨೫ ರಂದು ನಡೆಯಲಿದ್ದು , ಅದರ ಮೊದಲು ಆರೋಪ ಪಟ್ಟಿ ಸಲ್ಲಿಸಲು ಕ್ರೈಂ ಬ್ರಾಂಚ್ ಮುಂದಾಗಿದೆ.