ಮಂಗಳೂರು,ಜು.08(DaijiworldNews/AK): ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಡೊಂಗರಕೇರಿ ವಾರ್ಡಿನಲ್ಲಿ ಮಂಜುಳಾ ನಾಯಕ್ ನೇತೃತ್ವದಲ್ಲಿ ವಿವಿಧ ಮನೆಗಳಿಗೆ ತೆರಳಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಸೊಳ್ಳೆ ಕಡಿತದಿಂದ ಉಂಟಾಗುವ ಡೆಂಗ್ಯೂ ರೋಗದ ಲಕ್ಷಣಗಳು ಹಾಗೂ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು.ನೀರು ಶೇಖರಣೆಯಾಗುವ ಪ್ರದೇಶದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುವ ಸಾಧ್ಯತೆಯಿದ್ದು ಅಂತಹ ಪ್ರದೇಶಗಳನ್ನು ಶುಚಿಯಾಗಿಡುವ ಜತೆ ನಮ್ಮ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆಯ ಕಡೆ ಆದ್ಯತೆ ನೀಡುವುದು ಹಾಗೂ ಸೊಳ್ಳೆ ನಿವಾರಕಗಳ ಬಳಕೆಯ ಮೂಲಕ ಡೆಂಗ್ಯೂ ಹರಡುವುದುನ್ನು ತಡೆಯಲು ಸಾಧ್ಯ ಎಂದು ಮಂಜುಳಾ ನಾಯಕ್ ಜನರಿಗೆ ತಿಳಿಸಿದರು.
ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲ ರೀತಿಯ ಉಪಕ್ರಮ ಕೈಗೊಳ್ಳಬೇಕು. ಸ್ವಚ್ಛತೆ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಿ. ವಿದ್ಯಾರ್ಥಿಗಳ ಮೂಲಕ ಪಾಲಕರಿಗೆ ಮನವರಿಕೆ ಮಾಡಬೇಕು. ಪ್ರಕರಣ ನಿರ್ಲಕ್ಷ್ಯ ಮಾಡದೇ ತಕ್ಷಣ ಚಿಕಿತ್ಸೆ ದೊರಕಿಸಿ. ಅನಗತ್ಯ ಭಯ, ಆತಂಕಕ್ಕೆ ಅವಕಾಶ ನೀಡದೇ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಅರಿವು ನೀಡಬೇಕು.
ಡೆಂಗ್ಯೂ ಜ್ವರದ ಲಕ್ಷಣ ಕಾಣಿಸಿಕೊಂಡರೆ ಆರಂಭಿಕ ಹಂತದಲ್ಲೇ ವೈದ್ಯರನ್ನು ಸಂಪರ್ಕಿಸುವ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅರಿವು ಮೂಡಿಸೋಣ. ಡೆಂಗ್ಯೂ ಮುಕ್ತ ಡೊಂಗರಕೇರಿ ನಮ್ಮ ಆದ್ಯತೆ.
ಜಾಗೃತಿ ಕಾರ್ಯಕ್ರಮದಲ್ಲಿ ಜೆಸಿಂತಾ , ಸಂಜನಾ ಚಲವಾದಿ , ವಿದ್ಯಾ ಶೆಣೈ ,ಬಿ.ಕೆ ಚಂದ್ರಣ್ಣ,ಸಂಗಪ್ಪ ಭಡಕನ್ನ ಹಾಗೂ ಮಂಜು ಮಡ್ಡಿ ಉಪಸ್ಥಿತರಿದ್ದರು.