ಕುಂದಾಪುರ, ಜು.08(DaijiworldNews/AK): ಹೆದ್ದಾರಿಯೆಂದರೆ ಪ್ರಾಣ ಹಿಂಡುವ ಹೊಂಡಗಳಾಗಿ ಬಿಟ್ಟಿವೆ. ಪ್ರಾರಂಭದಿಂದಲೂ ಕೂಡಾ ಕುಂದಾಪುರದಲ್ಲಿ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಎಂದು ಸಾರ್ವಜನಿಕರು ದೂರುತ್ತಲೇ ಬಂದರೂ ಕೂಡಾ ಸಂಬಂಧಪಟ್ಟವರು ಕಿವಿಗೆ ಹಾಕಿಕೊಂಡಿಲ್ಲ. ಕುಂದಾಪುರದ ಬಸ್ರೂರು ಮೂರ್ಕೈ ಹತ್ತಿರ ಕಳೆದ ನಾಲ್ಕಾರು ವರ್ಷಗಳಿಂದ ಸರ್ವಿಸ್ ರಸ್ತೆಯದ್ದು ಮಳೆಗಾಲದ ದೊಡ್ಡ ಸಮಸ್ಯೆ ಎದುರಾಗಿದೆ.
ಸರ್ವಿಸ್ ರಸ್ತೆ ಎನ್ನುವುದು ಮಳೆಗಾಲದಲ್ಲಿ ಹೊಳೆಯಾಗಿ ಬಿಡುತ್ತದೆ. ಎರಡು ಅಂಡಾರ್ ಪಾಸ್ ಗಳು ಇಲ್ಲಿದ್ದು ಅಂಡಾರ್ ಪಾಸ್ ಒಳಗಡೆ ನೀರು ನಿಂತು ವಾಹನ ಸಂಚಾರಕ್ಕೆ ಅಸಾಧ್ಯವಾಗಿ ಬಿಡುತ್ತದೆ.ರಸ್ತೆಯ ಮೇಲೆಯೇ ಹೊಳೆಯಂತೆ ನೀರು ನಿಲ್ಲುವುದರಿಂದ ದ್ವಿಚಕ್ರವಾಹನ ಸವಾರರು ಅಲ್ಲಿರುವ ಹೊಂಡಗಳ ಆಳ ಅರಿವಿಲ್ಲದೆ ಚಲಿಸಿ ಕೈಕಾಲು ಮುರಿದುಕೊಂಡ ಘಟನೆಗಳು ಇವೆ. ನಿತ್ಯ ಇಲ್ಲ ಕನಿಷ್ಠ ಮೂರ್ನಾಲ್ಕು ಮಂದಿ ಬೈಕ್ ಸವಾರರು ಅಪಘಾತ ಮಾಡಿಕೊಳ್ಳುತ್ತಾರೆ. ಇಲ್ಲಿ ನೀರು ನಿಲ್ಲುವುದನ್ನು ಇನ್ನೂ ಕೂಡಾ ಸರಿ ಪಡಿಸಲು ಆಗಲೇ ಇಲ್ಲ.
ಈ ಹಿಂದೆ ಹಾಲಾಡಿ ಶ್ರೀನಿವಾಸ ಶೆಟ್ಟರು ಶಾಸಕರಾಗಿದ್ದ ಸಂದರ್ಭದಲ್ಲಿ ಕೂಡಾ ಈ ಸಮಸ್ಯೆಗೊಂದು ತಾರ್ಕಿಕ ಪರಿಹಾರ ಒದಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ತಾಕಿತ್ತು ಮಾಡಿದ್ದರು. ಸ್ಥಳಕ್ಕೆ ಅವರು ಭೇಟಿ ನೀಡಿ ಕೂಡಲೇ ಸರಿಪಡಿಸುವಂತೆ ಹೇಳಿದ್ದರು. ಆದರೆ ಅದು ಹಾಗೆಯೇ ಮುಂದುವರಿದಿದೆ. ಈಗ ಶಾಸಕರು ಬದಲಾಗಿದ್ದಾರೆ. ಸಮಸ್ಯೆ ಮಾತ್ರ ಹಾಗೆಯೇ ಇದೆ. ಅಧಿಕಾರಿಗಳಿಗೆ ಎಷ್ಟೇ ಹೇಳಿದರೂ ಅವರು ಅದನ್ನು ಹಗುರವಾಗಿ ಪರಿಗಣಿಸುವುದು ರೂಢಿಯಾಗಿ ಹೋಗಿದೆ.
ಕುಂದಾಪುರ ಕೇಂದ್ರ ಪ್ರದೇಶದಲ್ಲಿ ರಸ್ತೆಯ ಅವ್ಯವಸ್ಥೆ, ಮಳೆಗಾಲಕ್ಕೆ ಇಲ್ಲಿ ರಸ್ತೆಯ ದುಸ್ತಿತಿಯನ್ನು ಸಾರ್ವಜನಿಕರು ನೆನೆದು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ಬಗ್ಗೆ ಆಕ್ರೋಶ ವ್ಯಕ್ತ ಪಡಿಸುತ್ತಾರೆ.ಗುತ್ತಿಗೆ ಪಡೆದ ನವಯುಗ ಸಂಸ್ಥೆ ರಸ್ತೆಯನ್ನು ಸಮರ್ಪಕವಾಗಿ ನೋಡಿಕೊಳ್ಳಬೇಕಾದ ಜವಬ್ದಾರಿ ಹೊಂದಿದೆ. ಆದರೆ ಗುತ್ತಿಗೆ ಸಂಸ್ಥೆಯ ಬೇಜಬ್ದಾರಿ, ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ ದ ನಿಲುವು ಸಾರ್ವಜನಿಕರಿಗೆ ಸಮಸ್ಯೆಯಾಗಿ ಬಿಟ್ಟಿದೆ
.
ಮಳೆಗಾಲದಲ್ಲಿ ಬಸ್ರೂರು ಮೂರ್ ಕೈ ಮಾತ್ರ ಸಮಸ್ಯೆಯಲ್ಲ, ಸರ್ವೀಸ್ ರಸ್ತೆಯ ಉದ್ದಕ್ಕೂ ಇದೆ ಸಮಸ್ಯೆ. ಕುಂದಾಪುರ ನಗರ ಪ್ರವೇಶದಲ್ಲಿ ಚರಂಡಿಯ ಸ್ಲ್ಯಾಬ್ ಮುರಿದು ಹೋಗಿ ಮೂರು ತಿಂಗಳು ಕಳೆದರೂ ಬ್ಯಾರಿಕೇಡ್ ಅಡ್ಡ ಇಟ್ಟೇ ಮೂರು ತಿಂಗಳು ಕಳೆದರೆ ವಿನಃ ಒಂದೇರಡು ಸ್ಲ್ಯಾಬ್ ತಂದು ಹಾಕುವ ಕೆಲಸ ಸಂಬಂಧಪಟ್ಟವರು ಮಾಡಲಿಲ್ಲ.
ಜುಲೈ 8ರಂದು ಹೆದ್ದಾರಿಯ ಬಗ್ಗೆಸಂಸದರ ನೇತೃತ್ವದಲ್ಲಿ ಸಭೆ ಇದೆ ಎಂದಾಗ ಎಚ್ಚೆತ್ತುಕೊಂಡು ಗಡಿಬಿಡಿಯಲ್ಲಿ ದುರಸ್ತಿಗೆ ಮುಂದಾದರು.ಮಳೆಗಾಲದಲ್ಲಿ ಕುಂದಾಪುರದಲ್ಲಿ ವಾಹನ ಸವಾರರು ಅನುಭವಿಸುವ ಸಮಸ್ಯೆಗೆ ಕೊನೆಯೇ ಇಲ್ಲವಾಗಿದೆ. ಮೇಲ್ಸೇತುವೆಯ ನೀರು ನೇರಾ ಸರ್ವೀಸ್ ರಸ್ತೆಯ ಮೇಲೆ ಹರಿದು ಹೋಗುವುದು, ಹೆದ್ದಾರಿಯ ಮೇಲೆ ತುಂಬಿದ ನೀರು ವಾಹನ ವೇಗವದಿಂದ ಹೋಗುವಾಗ ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಭಿಷೇಕವಾಗುವುದು ಇಲ್ಲಿ ನಿತ್ಯ ನೂತನ
ಸಂಸದರ ಭೇಟಿ:
ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳ ಬಗ್ಗೆ ಸೋಮವಾರ ಬೆಳಿಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯ ಬಳಿಕ ಸಂಸದರು ಅಧಿಕಾರಿಗಳೊಂದಿಗೆ ಸಮಸ್ಯೆ ಇರುವ ಪ್ರದೇಶಗಳಿಗೆ ಭೇಟಿ ನೀಡಿದರು. ಸ್ಥಳೀಯರು, ಪಕ್ಷದ ಪ್ರಮುಖರು ಸಂಸದರು ಹಾಗೂ ಶಾಸಕರಿಗೆ ಸಮಸ್ಯೆಯನ್ನು ಎಳೆಎಳೆಯಾಗಿ ವಿವರಿಸಿದರು. ಕೂಡಲೇ ಹೆದ್ದಾರಿಯಲ್ಲಿ ಮಳೆಯಿಂದ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಸ್ರೂರು ಮೂರ್ಕೈ, ಅಂಡಾರ್ ಪಾಸ್, ಕೋಟೇಶ್ವರ ಮೊದಲಾದ ಪ್ರದೇಶಗಳಿಗೆ ಸಂಸದರು ಭೇಟಿ ನೀಡಿದರು.